‘ಪೊಗರು’ ತನ್ನ ಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಎಚ್ಚರಿಕೆ!
ಹೈಲೈಟ್ಸ್:
- ನಂದಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾದ ವಿರುದ್ಧ ತಿರುಗಿ ಬಿದ್ದ ಬ್ರಾಹ್ಮಣ ಸಮುದಾಯ
- ಬ್ರಾಹ್ಮಣರಿಗೆ ಅವಮಾನ ಆಗುವಂತಹ ದೃಶ್ಯಗಳನ್ನು ಕೂಡಲೇ ತೆಗೆದುಹಾಕುವಂತೆ ಅನೇಕರಿಂದ ಒತ್ತಾಯ
- ಪ್ರಕರಣದ ಕುರಿತು ಚಿತ್ರತಂಡಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
- ಆಕ್ಷೇಪಾರ್ಹ ಶಾಟ್‌ಗಳಿಗೆ ಕತ್ತರಿ ಹಾಕಲು ಚಿತ್ರತಂಡ ಒಪ್ಪಿಕೊಂಡಿದ್ದು, ಅಗತ್ಯ ಕಾಲಾವಕಾಶ ಕೇಳಿದೆ
‘ಪೊಗರು ತನ್ನ ಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ. ಅದು ಬಿಟ್ಟು ಬೇರೆ ಸಮುದಾಯದ ಮೇಲೆ, ಬ್ರಾಹ್ಮಣರ ಮೇಲೆ ಅವಹೇಳನ ಮಾಡಿರುವುದು ನಿಜಕ್ಕೂ ಅತ್ಯಂತ ಖಂಡನೀಯ. ಚಿತ್ರತಂಡವು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಲ್ಲದೆ ಅರ್ಚಕರ ಸಂಪ್ರದಾಯವನ್ನು ಅವಮಾನಿಸಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಟ್ವೀಟ್ ಮಾಡಿದ್ದಾರೆ.
‘ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ. ಯಾವುದೇ ಕಾರಣಕ್ಕೂ ಪೊಗರು ಚಿತ್ರ ಬ್ರಾಹ್ಮಣರ ಮೇಲೆ ಮಾಡಿರುವ ಕೃತ್ಯವನ್ನು ಕತ್ತರಿಸಿ, ನಂತರ ಸಿನಿಮಾ ಬಿಡುಗಡೆ ಮಾಡಬೇಕು. ಇದಕ್ಕೆ ರಾಜ್ಯದ ಸಚಿವನಾಗಿಯೂ ಕೂಡ, ಸಮಾಜದ ಮೇಲೆ ಆಗಿರುವ ಈ ಧೋರಣೆಯನ್ನು ಖಂಡಿಸುತ್ತೇನೆ. ಕೂಡಲೇ ತಿದ್ದುಪಡಿ ಮಾಡಿ ಬಿಡುಗಡೆ ಮಾಡಬೇಕು ಎಂದು ವಿನಂತಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಚಿತ್ರತಂಡಕ್ಕೆ ನೇರವಾಗಿ ತಾವು ಎಚ್ಚರಿಸುತ್ತಿರುವುದಾಗಿ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಈ ಆಕ್ಷೇಪಕ್ಕೆ ಈಗಾಗಲೇ ಚಿತ್ರದ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ಆಕ್ಷೇಪ ವ್ಯಕ್ತವಾಗಿರುವ ಶಾಟ್‌ಗಳನ್ನು ತೆಗೆದು ಹಾಕುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಆ ಪ್ರಕ್ರಿಯೆಗೆ ಸ್ವಲ್ಪ ಸಮಯಾವಕಾಶ ಬೇಕು ಎಂಬುದಾಗಿ ಅವರು ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಪೂಜಾ ಪದ್ಧತಿ , ಅರ್ಚಕರ ಅವಮಾನ ಸಹಿತ ಹಿಂದು ಸಮಾಜದ ಭಾವನೆ, ಶ್ರದ್ಧೆ, ಆಚಾರ, ವಿಚಾರಗಳ ಅವಹೇಳನ ಸಲ್ಲದು. ಸೆನ್ಸಾರ್ ಮಂಡಳಿ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕದಿರುವುದು ಸಂಶಯಕ್ಕೆ ಎಡೆ ಮಾಡಿದೆ’ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.