‘ಪೊಗರು’ ಸಿನಿಮಾ ವಿವಾದ: ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದ ಚಿತ್ರತಂಡ
‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ ಬಿದ್ದಿದೆ, ಒತ್ತಡಕ್ಕೆ ಮಣಿದು ಆಕ್ಷೇಪಾರ್ಹ ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದ್ದು ಸಧ್ಯ ಬ್ರಾಹ್ಮಣ ಸಭಾ ಸದಸ್ಯರು ಚಿತ್ರ ವೀಕ್ಷಿಸಿದ್ದಾರೆ.
‘ಪೊಗರು’ ಚಿತ್ರದ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ ಸೆನ್ಸಾರ್ ಮಂಡಳಿಗೆ ಮತ್ತೆ ಚಿತ್ರವನ್ನು ಕಳಿಸಲಾಗುವುದು. ಮಂಡಳಿ ಅನುಮತಿ ಸಿಕ್ಕ ಬಳಿಕ ಮತ್ತೆ ‘ಪೊಗರು’ ಚಿತ್ರ ಪ್ರದರ್ಶನ ಮಾಡಲಾಗುವುದು ಎಂದು ತಂಡ ಹೇಳಿದೆ.
ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ ‘ಪೊಗರು’ ಇದೇ ಫೆಬ್ರವರಿ 19ರಂದು ಬಿಡುಗಡೆಯಾಗಿದ್ದು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮ ದೃಶ್ಯಗಳಿದ್ದ ಹಿನ್ನೆಲೆ ಬ್ರಾಹ್ಮಣ ಸಂಘಟನೆಯಿಂದ ತೀವ್ರ ಪ್ರತಿರೋಧ ಕೇಳಿಬಂದಿತ್ತು.
ಅಲ್ಲದೆ ಸಮುದಾಯವೊಂದಕ್ಕೆ ಅಪಮಾನಿಸುವ ‘ಪೊಗರು’ ಚಿತ್ರದ ದೃಶ್ಯಗಳನ್ನು ಮಂತ್ರಾಲಯದ ರಾಘವೇಂದ್ರ ಮಠದ ಸುಬುಧೇಂದ್ರ ಶ್ರೀಪಾದರು ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಖಂಡಿಸಿದ್ದು, ಕೂಡಲೇ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದರು.