ಕೇರಳದಲ್ಲಿ ಸಮುದ್ರಕ್ಕೆ ಜಿಗಿದು ಈಜಿ ಗಮನ ಸೆಳೆದ ರಾಹುಲ್ ಗಾಂಧಿ: ಮೀನು ಖಾದ್ಯ ಸವಿದ ಕಾಂಗ್ರೆಸ್ ‘ಯುವರಾಜ’
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಕೊಲ್ಲಮ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸಮುದ್ರಕ್ಕೆ ಜಿಗಿದು ಈಜಾಡಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇರಳ ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ನಿನ್ನೆ ಕೊಲ್ಲಂ ಜಿಲ್ಲೆಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ತಂಗಸ್ಸೆರಿ ಸಮುದ್ರದಲ್ಲಿ ತಮ್ಮ ಕೆಲವು ಸ್ನೇಹಿತರು ಹಾಗೂ ಮೀನುಗಾರರೊಂದಿಗೆ ಸುಮಾರು 10 ನಿಮಿಷಗಳ ಕಾಲ ಈಜಾಡಿದ್ದಾರೆ.
ಸಮುದ್ರ ತೀರಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರು ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ ಜಿಗಿದರು. ಅವರೊಟ್ಟಿಗೆ ರಾಹುಲ್ ಗಾಂಧಿ ಸಹ ದೋಣಿಯಿಂದ ನೀರಿಗೆ ಜಿಗಿದರು.
ನಮಗೆ ಅವರು ಸಮುದ್ರಕ್ಕಿಳಿಯುತ್ತಾರೆ ಎಂದು ಗೊತ್ತಿರಲಿಲ್ಲ. ನಮಗೆಲ್ಲಾ ಒಂದು ಕ್ಷಣ ಅಚ್ಚರಿಯಾಯಿತು, ಆದರೆ ರಾಹುಲ್ ಗಾಂಧಿಯವರು ಬಹಳ ಆರಾಮಾಗಿದ್ದರು. ಸಮುದ್ರ ನೀರಿನಲ್ಲಿ ಸುಮಾರು 10 ನಿಮಿಷಗಳ ಕಾಲ ಈಜಿದರು. ಅವರಿಗೆ ಈಜಲು ಚೆನ್ನಾಗಿ ಗೊತ್ತಿದೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ತೊಟ್ಟಿದ್ದ ನೀಲಿ ಬಣ್ಣದ ಟಿ ಶರ್ಟ್ ಮತ್ತು ಖಾಕಿ ಚಡ್ಡಿಯಲ್ಲಿಯೇ ಇಳಿದರು. ಈಜಾಡಿದ ನಂತರ ತೀರಕ್ಕೆ ಬಂದು ಬಟ್ಟೆ ಬದಲಿಸಿಕೊಂಡರಂತೆ. ಸಮುದ್ರ ತೀರದಲ್ಲಿ ಸುಮಾರು ಎರಡೂವರೆ ಗಂಟೆ ಕಾಲ ಕಳೆದ ಅವರು ಅಲ್ಲಿನ ಮೀನುಗಾರರೊಂದಿಗೆ ಕುಶಲೋಪಚಾರ ವಿಚಾರಿಸಿ ಅವರು ಮಾಡಿದ ಮೀನಿನ ಅಡುಗೆ ತಿಂದು ಖುಷಿಪಟ್ಟರಂತೆ.