ಬೆಂಗಳೂರು ನಗರ ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ
ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದ ಕೆಂಗಣ್ಣಿಗೆ ಗುರಿಯಾಗಿ ಭಾರೀ ವಿವಾದ-ಸುದ್ದಿಯಲ್ಲಿರುವ ನಟ ಜಗ್ಗೇಶ್ ಅವರನ್ನು ಬಿಜೆಪಿಯ ಬೆಂಗಳೂರು ನಗರ ಘಟಕದ ವಕ್ತಾರರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಒಟ್ಟು 10 ನಗರಗಳಿಗೆ 10 ಮಂದಿಯನ್ನು ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗ್ಗೇಶ್ ಅವರು ಬಿಜೆಪಿ ಟಿಕೆಟ್ ನಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಹೆಚ್ಚು ಸಿನೆಮಾ ಮತ್ತು ರಿಯಾಲಿಟಿ ಶೋಗಳಲ್ಲಿ ತೊಡಗಿಸಿಕೊಂಡರು. ಇದೀಗ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿದೆ.
ತಮ್ಮನ್ನು ಗುರುತಿಸಿ ಪಕ್ಷ ನೀಡಿದ ಜವಾಬ್ದಾರಿಗೆ ನಟ ಜಗ್ಗೇಶ್ ಪಕ್ಷದ ನಾಯಕರಿಗೆ ಧನ್ಯವಾದ ಹೇಳಿದ್ದಾರೆ.
ವಾರ್ಡ್ ಗಳ ಪುನರ್ ವಿಂಗಡನೆ ಪ್ರಕ್ರಿಯೆ ವಿವಾದ ಮತ್ತು ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವುದರಿಂದ ಜಗ್ಗೇಶ್ ಗೆ ನೀಡಿರುವ ಹೊಸ ಹೊಣೆಗಾರಿಕೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ.