ಇಂಧನ ಬೆಲೆ ಏರಿಕೆ ಬಿಸಿ: ಇಂದು ದೇಶಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲೂ ಬೆಂಬಲ
ಬೆಂಗಳೂರು (ಫೆ. 26): ಇಂಧನ ಬೆಲೆ ಏರಿಕೆ, ಇ-ವೇ ಬಿಲ್ , ಹಸಿರು ತೆರಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತರ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಬಂದ್ಗೆ ರಾಜ್ಯದಲ್ಲಿ ಕೂಡ ಬೆಂಬಲ ವ್ಯಕ್ತವಾಗಿದ್ದು, ಇಂದು ಲಾರಿಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ. ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ಕರೆ ನೀಡಿರುವ ಬಂದ್ಗೆ ರಾಜ್ಯ ಲಾರಿ ಮಾಲೀಕರ ಸಂಘ ಕೂಡ ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ಷಣ್ಮುಗಪ್ಪ ಈಗಾಗಲೇ ತಿಳಿಸಿದ್ದಾರೆ. ಗುತ್ತಿಗೆ ಅವಧಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಟೋಲ್ಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಮುಷ್ಕರದ ಹಿನ್ನಲೆ ಇಂದು 20 ಲಕ್ಷಕ್ಕೂ ಹೆಚ್ಚು ಲಾರಿಗಳು ರಸ್ತೆಗೆ ಇಳಿಯುವುದಿಲ್ಲ. ಇದರಿಂದ ದೈನಂದಿನ ಸರಕು-ಸಾಗಣೆ ಸಾಗಾಟ ಮೇಲೆ ಪರಿಣಾಮ ಬೀರಲಿದೆ.
ಇಂಧನ ಹೆಚ್ಚಳದಿಂದಾಗಿ ಒಂದು ಕಿಲೋಮೀಟರ್ ಗೆ ಲಾರಿ ಓಡಿಸಲು ಮಾಲೀಕರಿಗೆ 36 ರೂ. ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡಿಸೇಲ್ ಕಡಿಮೆ ಇದೆ. ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡಿಸೇಲ್ ಹಾಕಿಸಿಕೊಂಡು ಬರುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಹಿನ್ನಲೆ ಪ್ರತಿ ಲೀಟರ್ ಡಿಸೇಲ್ ಗೆ 3 ರೂ ಸೆಸ್ ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ.
ಅಷ್ಟೇ ಅಲ್ಲದೇ ,ಟೋಲ್, ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಕ್ರಾಪಿಂಗ್ ನೀತಿ, ಇ-ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್6 ವಾಹನಗಳ ವೆಚ್ಚ, ವಾಹನಗಳ ಬಿಡಿಭಾಗಗಳ ದರ ಹೆಚ್ಚಳದಿಂದ ಸಮಸ್ಯೆಯಾಗಿದೆ. ಈ ಹಿನ್ನಲೆ ಇಂದು ಒಂದು ದಿನ ಸಾಕೇಂತಿಕ ಮುಷ್ಕರ ನಡೆಸಲಾಗುತ್ತಿದೆ.. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಬಗ್ಗೆ ಕೂಡಲೇ ಸರ್ಕಾರ ಮಾತುಕತೆಗೆ ಕರೆಯಬೇಕು. ಸರ್ಕಾರ ಮಾತುಕತೆ ನಡೆಸಲಿಲ್ಲ ಎಂದರೆ ಮಾರ್ಚ್ 15 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಕೆ ನೀಡಿದರು.
ಹೆದ್ದಾರಿಗಳಲ್ಲಿ ಟೋಲ್ ಲೂಟಿ ನಡೆಯುತ್ತಿದೆ. ಅವ ಮುಗಿದರೂ ಟೋಲ್ ಸಂಗ್ರಹ ನಡೆಯುತ್ತಿದೆ. ರಾಜ್ಯದಲ್ಲಿ 11 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಅವ ಮುಗಿದರೂ ನಿರ್ವಹಣೆ ಹೆಸರಲ್ಲಿ ಸಂಗ್ರಹ ಮಾಡಲಾಗುತ್ತಿದೆ. ನೈಸ್ ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಮಾಡಿಲ್ಲ. ಇದರಿಂದ ಕಿಲೋ ಮೀಟರ್ ಗಟ್ಟಲೇ ಸಾಲು ನಿಲ್ಲುತ್ತಿವೆ. ಕೂಡಲೇ ರಾಜ್ಯ ನೈಸ್ ರಸ್ತೆಯ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಸೂಚಿಸಲು ಆಗ್ರಹಿಸಿದರು.
ಬಂದ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸುಮಾರು ಆರು ಲಕ್ಷ ಲಾರಿಗಳು ರಸ್ತೆಗಳಿಗೆ ಇಳಿಯುವುದಿಲ್ಲ. ಲಾರಿ ಮಾಲೀಕರು ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಯಶಸ್ವಿಗೆ ಬೆಂಬಲ ನೀಡಿದ್ದಾರೆ.