ಲಸಿಕೆ ಪಡೆದ ಪ್ರಧಾನಿ; ಇಂದಿನಿಂದ 27 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡುವ ಮಹಾ ಅಭಿಯಾನ

ನವದೆಹಲಿ(ಮಾ. 01): ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವರ್ಕರ್ಸ್​ಗೆ ಲಸಿಕೆ ನೀಡುವ ಕಾರ್ಯದ ಬಳಿಕ ಮೂರನೇ ಹಂತರ ಲಸಿಕಾ ಅಭಿಯಾನ ಇಂದು ಚಾಲನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಇಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇಂದಿನಿಂದ 60 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ ಬೇರೆ ಕಾಯಿಲೆಗಳನ್ನ ಹೊಂದಿರುವ 45ರಿಂದ 59 ವರ್ಷದವರೆಗಿನ ವ್ಯಕ್ತಿಗಳಿಗೆ ಈ ಮೂರನೇ ಹಂತದ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತದೆ. ಅಂದಾಜು ಒಟ್ಟು 27 ಕೋಟಿ ಮಂದಿ ಈ ಲಸಿಕೆಗೆ ಅರ್ಹರಾಗಿದ್ದಾರೆ. ದೇಶಾದ್ಯಂತ ನಿಗದಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್​ಗೆ 250 ರೂನಂತೆ ಲಸಿಕೆ ಪಡೆಯಬಹುದಾಗಿದೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಲಸಿಕೆಯ ಡೋಸ್ ಪಡೆದ ಪ್ರಧಾನಿ ಮೋದಿ, ಮೂರನೇ ಹಂತದ ಅಭಿಯಾನಕ್ಕೆ ನಿಗದಿಯಾಗಿರುವ ಎಲ್ಲಾ ಅರ್ಹ ವ್ಯಕ್ತಿಗಳು ಲಸಿಕೆ ತೆಗೆದುಕೊಳ್ಳಬೇಕೆಂದು ಈ ವೇಳೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. “AIIMS ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದೆ. ಕೋವಿಡ್-19 ವಿರುದ್ಧ ನಡೆಯುತ್ತಿರುವ ಜಾಗತಿಕ ಸಮರವನ್ನ ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಬಲಪಡಿಸಿರುವ ರೀತಿ ಗಮನಾರ್ಹವಾಗಿದೆ. ಅರ್ಹರಾದ ಎಲ್ಲರೂ ವವ್ಯಾಕ್ಸಿನ್ ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟು ಸೇರಿ ಭಾರತವನ್ನು ಕೋವಿಡ್​ಮುಕ್ತ ರಾಷ್ಟ್ರವನ್ನಾಗಿ ಮಾಡೋಣ” ಎಂದು ಕರೆ ನೀಡಿದರು.

ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನ ಪ್ರಧಾನಿ ಪಡೆದದ್ದು ವಿಶೇಷ. ಈ ಮೂಲಕ ಕೋವ್ಯಾಕ್ಸಿನ್ ಬಗ್ಗೆ ಜನಸಾಮಾನ್ಯರಿಗಿರುವ ತುಸು ಅನುಮಾನ ಮತ್ತು ಭಯವನ್ನ ಹೋಗಲಾಡಿಸುವ ಪ್ರಯತ್ನವನ್ನ ಪ್ರಧಾನಿ ಮಾಡಿದ್ಧಾರೆ. ಈ ಅಭಿಯಾನದ ಅರ್ಹ ಫಲಾನುಭವಿಗಳು ಕೋವಿನ್ (CO-WIN 2.0) ಪೋರ್ಟಲ್, ಆ್ಯಪ್ ಮತ್ತು ಆರೋಗ್ಯ ಸೇತುವಿನಂತಹ ಆ್ಯಪ್ ಮೂಲಕವೂ ಲಸಿಕೆಗೆ ನೊಂದಣಿ ಮಾಡಿಸಬಹುದು. ಸೋಮವಾರ ಬೆಳಗ್ಗೆ 9ಗಂಟೆಗೆ ಈ ನೊಂದಣಿಗೆ ಚಾಲನೆ ಸಿಗಲಿದೆ.

ಇದೇ ವೇಳೆ, ಕರ್ನಾಟಕದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಗಲಿದೆ. ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಲಸಿಕೆಗೆ ಅಣಿಯಾಗಿವೆ. ಬೆಂಗಳೂರಿನ 29 ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಹಲವು ಖಾಸಗಿ ಆಸ್ಪತ್ರೆಗಳಲ್ಲೂ ನಿರ್ದಿಷ್ಟದ ಹಣ ತೆತ್ತು ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *