ಉತ್ತರಾಧಿಕಾರಿ ಹುಡುಕಾಟದಲ್ಲಿ ದಾವೂದ್ | ನಿವೃತ್ತಿ ಜೀವನ ಬಯಸಿರುವ ಡಿ ಕಂಪನಿ ಡಾನ್
ನಿವೃತ್ತಿ ಜೀವನ ಬಯಸಿರುವ ಡಿ ಕಂಪನಿ ಡಾನ್ | ಮಕ್ಕಳು, ಅಳಿಯ ಮತ್ತು ಶಿಷ್ಯರ ಮಧ್ಯೆ ಪೈಪೋಟಿ
ದೊಡ್ಡ ಸಾಮ್ರಾಜ್ಯವನ್ನು ಕಟ್ಟಿರುವ ದಾವೂದ್ ಇಬ್ರಾಹಿಂ ಈಗ ಜೀವನದ ಸಂಧ್ಯಾಕಾಲದಲ್ಲಿದ್ದಾನೆ. ಆರೋಗ್ಯವೂ ಚೆನ್ನಾಗಿಲ್ಲ. ಪರಿಸ್ಥಿತಿಯೂ ಅನುಕೂಲಕರವಾಗಿಲ್ಲ. ಸಾಕಷ್ಟು ಸ್ಥಿತ್ಯಂತರಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಉತ್ತರಾಧಿ ಕಾರಿಯ ನೇಮಿಸುವ ತವಕದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಐವರು ಈ ಸ್ಪರ್ಧೆಯಲ್ಲಿದ್ದು, ಇವರಲ್ಲಿ ದಾವೂದ್‌ನ ಅತಿ ಶ್ರದ್ಧಾವಂತ ಮಗ ಹಾಗೂ ಬಿಂದಾಸ್ ಮನೋಭಾವದ ಅಳಿಯ ಕೂಡ ಸೇರಿದ್ದಾರೆ. ಡಿ ಕಂಪನಿಯಲ್ಲಿ ಕಂಡು ಬರುತ್ತಿರುವ ಉತ್ತರಾಧಿಕಾರಿ ಸಂಘರ್ಷ, ಸದ್ಯ ಕಾರ್ಪೊರೇಟ್ ಶೈಲಿಯಲ್ಲಿ ಈ ಅಪರಾಧ ಸಾಮ್ರಾಜ್ಯವನ್ನು ನಡೆಸು ತ್ತಿರುವ ದಾವೂದ್‌ನ ಬಂಟರ ಒಲವು ನಿಲುವುಗಳ ಮೇಲೆ ಅದರ ಫಲಿತಾಂಶ ನಿಂತಿದೆ. ಈ ಹಿನ್ನೆಲೆಯಲ್ಲಿ ಉತ್ತರಾಧಿ ಕಾರಿಗಳ ಸ್ಪರ್ಧೆಯಲ್ಲಿರುವವರ ಬಗೆಗೆ ಒಂದು ನೋಟ.
ಶೇಖ್ ದಾವೂದ್ ಹಸನ್
ಹೀಗೆ ಹೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ದಾವೂದ್ ಇಬ್ರಾಹಿಂ ಎಂದರೆ ತಕ್ಷಣ ಗೊತ್ತಾಗುತ್ತದೆ. ಅಪರಾಧ ಜಗತ್ತನ್ನು
ದಶಕಗಳ ಕಾಲ ಆಳಿ ಡಿ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಿರುವ ದಾವೂದ್ ಇಬ್ರಾಹಿಂಗೆ ಈಗ ೬೫ ವರ್ಷ. ಆದರೆ ಕರಾಚಿಯಲ್ಲಿರುವ ಆತನ ಅರಮನೆಯಂಥ ಬಂಗಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಜನ್ಮದಿನದ ಸಂಭ್ರಮ, ಸಡಗರ ಕಂಡುಬರಲಿಲ್ಲ.
ಆ ಮನೆಯಲ್ಲಿ ಮಫ್ತಿಯಲ್ಲಿರುವ ಕಾವಲುಗಾರರ ಬಿಗಿ ಪಹರೆ ಇದೆ. ಆದರೆ ಅಲ್ಲಿ ಕೆಲವು ಸಮಯದಿಂದ ಅಂಥ ಚಟುವಟಿಕೆಗಳು ಕಂಡುಬರುತ್ತಿಲ್ಲ. ಏಕೆಂದರೆ ಅದರ ನಿವಾಸಿಗಳೇ ಅಲ್ಲಿ ವಾಸಿಸುತ್ತಿಲ್ಲ. ಐದಡಿ ಆರಂಗುಲದ ಈ ದಡೂತಿ ಆಸಾಮಿ ತಲೆತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಬರುವ ಮುನ್ನ ದಾವೂದ್ ಇಬ್ರಾಹಿಂ ಕಸ್ಕರ್ ಎಂಬ ಹೆಸರಿತ್ತು. ಕಳೆದ ಮೂರು ದಶಕಗಳಿಂದ
ಆತ ಅಂತಾರಾಷ್ಟ್ರೀಯ ಬೇಹುಗಾರಿಕೆ ಹಾಗೂ ಭದ್ರತಾ ಸಂಸ್ಥೆಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತ, ಅವುಗಳ ಕಣ್ಣಿಗೆ ಮಣ್ಣೆರಚುತ್ತ ತನ್ನ ಅಪರಾಧ ಕೃತ್ಯಗಳನ್ನು ಎಗ್ಗಿಲ್ಲದೆ ನಡೆಸಿಕೊಂಡು ಹೋಗುತ್ತಿದ್ದಾನೆ.
೧೯೯೩ ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಮೆರಿಕವು ೨.೫ ಕೋಟಿ ಡಾಲರ್ ಬಹುಮಾನ ಘೋಷಿಸಿದ್ದರೂ ಆತ ಕೈಗೆ ಸಿಕ್ಕಿಲ್ಲ. ಭಾರತಕ್ಕೆ ಬೇಕಾಗಿರುವ ವ್ಯಕ್ತಿಯಾಗಿದ್ದರೂ ದಾವೂದ್ ಜಗತ್ತಿನಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಪ್ರಯಾಣ ಮಾಡುತ್ತ, ತನ್ನ ವ್ಯವಹಾರವನ್ನು ನಡೆಸಿಕೊಂಡು ಹೋಗಿದ್ದಾನೆ. ಆತನ ಡಿ ಕಂಪನಿ ಕಳ್ಳಸಾಗಣೆ, ಕೊಲೆ, ದರೋಡೆ, ಡಕಾಯಿತಿ, ಸುಲಿಗೆ
ಮೊದಲಾದ ಪ್ರಕರಣಗಳನ್ನು ಅಬಾಧಿತವಾಗಿ ನಡೆಸಿಕೊಂಡು ಬರುತ್ತಿದೆ. ಏಷ್ಯ, ಆಫ್ರಿಕಾ, ಯುರೋಪ್ ಹಾಗೂ ಅಮೆರಿಕಗಳಲ್ಲಿ ಅವನ ಸಾಮ್ರಾಜ್ಯ ವಿಸ್ತರಿಸಿದ್ದು, ಅವುಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಮ್ಯಾನೇಜರ್‌ಗಳಿದ್ದಾರೆ. ಗನ್ ವ್ಯವಹಾರ,
ಬಾಂಬ್ ದಾಳಿ, ಖೋಟಾ ನೋಟು ವಹಿವಾಟು, ರಿಯಲ್ ಎಸ್ಟೇಟ್ ಬಿಸಿನೆಸ್, ಕಾರ್ಖಾನೆಗಳು, ಮಾದಕವಸ್ತು ಕಳ್ಳಸಾಗಣೆ ಹಾಗೂ ಕೊಲೆ- ಇವೇ ಮೊದಲಾದ ವ್ಯವಹಾರಗಳು.
ಇಂತಿಪ್ಪ ದಾವೂದ್ ಇಬ್ರಾಹಿಂನ ಆರೋಗ್ಯ ಈಚೆಗೆ ಅಷ್ಟೊಂದು ಸರಿಯಾಗಿಲ್ಲ. ಕೋವಿಡ್ ಸೋಂಕಿಗೂ ತುತ್ತಾಗಿದ್ದ
ಎನ್ನಲಾಗಿದೆ. ಅದೂ ಅಲ್ಲದೆ ಪರಿಸ್ಥಿತಿ ಬದಲಾವಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತನ್ನ ದೊಡ್ಡದಾದ ಡಿ ಸಾಮ್ರಾಜ್ಯವನ್ನು ಮುಂದುವರಿಸಿಕೊಂಡು ಹೋಗುವಂಥ ಸೂಕ್ತ ಉತ್ತರಾಧಿಕಾರಿಯನ್ನು ನೇಮಕ ಮಾಡಲು ದಾವೂದ್ ಇಬ್ರಾಹಿಂ ಉತ್ಸುಕ ನಾಗಿದ್ದಾನೆ. ತಾನು ಸ್ವಸ್ಥವಾಗಿರುವಾಗಲೇ ಹಾಗೂ ಎಲ್ಲವೂ ತನ್ನ ಹತೋಟಿಯಲ್ಲಿರುವ ಸಮಯದಲ್ಲೇ ಹಾಗೂ ತನ್ನ ಕೈ ನಡೆಯುತ್ತಿರುವಾಗಲೇ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಇರಾದೆ ಆತನದು.
ಏಕೆಂದರೆ ಅಪರಾಧಿಗಳ ಜೀವನ ಸದಾ ಅಪಾಯದಲ್ಲಿ, ಅನಿಶ್ಚಿತತೆಯಲ್ಲಿರುತ್ತದೆ. ಅಲ್ಲದೆ ಇಲ್ಲಿಯವರೆಗೆ ಆತನಿಗೆ ಸಹಾಯ ಹಸ್ತ ಚಾಚಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಉತ್ತಾರಾಧಿಕಾರಿಯ ಆಯ್ಕೆ ಹಾಗೂ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ನಡೆಯಲಿ ಎಂಬ ಇಚ್ಛೆ ಹೊಂದಿದೆ.
ಈ ಬಾರಿ ದಾವೂದ್ ಇಬ್ರಾಹಿಂ, ದೂರದ ಯುರೋಪ್‌ನಲ್ಲಿ ಸದ್ದಿಲ್ಲದೆ ಜನ್ಮದಿನವನ್ನು ಆಚರಿಸಿಕೊಳ್ಳಲು ಕಾರಣ ಇದೊದೇ ಅಲ್ಲ. ಭಾರತೀಯ ಗುಪ್ತಚರ ಸಂಸ್ಥೆಗಳೂ ಉರುಳು ಬಿಗಿಗೊಳಿಸಿವೆ. ದಾವೂದ್ ಹಾಗೂ ಆತನ ಕುಟುಂಬದವರು ಪಾಕಿಸ್ತಾನದ ಕಾಯಂ ನಿವಾಸಿಗಳಾಗಿದ್ದು, ಅವರ ಬಳಿ ಆ ದೇಶದ ಪೌರತ್ವ ಕಾರ್ಡ್ ಕೂಡ ಇದೆ ಎಂಬುದು ಅವುಗಳ ಗಮನಕ್ಕೆ ಬಂದಿದ್ದು, ಈ ಕುರಿತಾದ ದಾಖಲೆಗಳು ಕೂಡ ಲಭ್ಯವಾಗಿವೆ. ಇಷ್ಟಲ್ಲದೆ ಇದೀಗ ತಾತನೂ ಆಗಿರುವ ದಾವೂದ್ ಇನ್ನು ನಿವೃತ್ತ ಜೀವನ ನಡೆಸುವ ಇರಾದೆ ಹೊಂದಿದ್ದಾನೆ.
ಆತನ ಮನೆಯವರೂ ಇದೀಗ ವಯಸ್ಸಿನಲ್ಲಿ, ಬುದ್ಧಿಯಲ್ಲಿ, ಅನುಭವದಲ್ಲಿ ಬೆಳೆದಿದ್ದಾರೆ. ಆತನ ತಕ್ಷಣದ ಕುಟುಂಬವೆಂದರೆ: ಪತ್ನಿ ಮೂಝಬೀನ್ ಶೇಖ್, ಪುತ್ರ ಮೊಯೀನ್ ನವಾಜ್, ಪುತ್ರಿಯರು-ಮಹರುಖ್, ಮೆಹರೀನ್, ಮಾಜಿಯಾ ಶೇಖ್. ಇದಲ್ಲದೆ ಮೊಯೀನ್ ಪತ್ನಿ ಸಾನಿಯಾ, ಮೆಹರುಖ್‌ಳ ಪತಿ ಜುನೈದ್ ಮಿಯಾಂದಾದ್, ಮೆಹರೀನ್‌ಳ ಪತಿ ಔರಂಗ್ ಜೇಬ್ ಮೆಹಮೂದ್,
ಕಿರಿಯ ಪುತ್ರಿ ಮಜಿಯಾ ಅವಿವಾಹಿತೆ. ಇದಲ್ಲದೆ ದಾವೂದ್‌ನ ಒಡಹುಟ್ಟಿದವರೂ ಇದ್ದಾರೆ. ಇವರು ಒಟ್ಟು ೧೨ ಮಂದಿ.
ಏಳು ಸೋದರರು ಹಾಗೂ ಐವರು ಸೋದರಿಯರು. ಆದರೆ ಈ ಪೈಕಿ ಆರು ಮಂದಿಯಷ್ಟೇ ಈಗ ಬದುಕಿದ್ದಾರೆ. ಈ ರಕ್ತ ಸಂಬಂಧಿಗಳಲ್ಲದೆ ದಾವೂದ್‌ನ ಬಲಗೈ ಬಂಟರೂ ಇದ್ದಾರೆ. ಛೋಟಾ ಶಕೀಲ್ ಮತ್ತು ಫಾಹಿಮ್ ಮಚ್ ಮಚ್ ಅವರು ಜಗತ್ತಿನಾದ್ಯಂತ ದಾವೂದ್‌ನ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಡಿ ಕಂಪನಿ ಇದೀಗ ಕಾರ್ಪೊರೇಟ್ ಕಂಪನಿಯಂತೆ
ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮುಖಗಳೆರಡೂ ಇವೆ ಎನ್ನುತ್ತಾರೆ ಮುಂಬೈ ಪೊಲೀಸರು. ಈ ಪರಿಸ್ಥಿತಿಯಲ್ಲಿ ದಾವೂದ್ ಇಬ್ರಾಹಿಂನ ಉತ್ತರಾಧಿಕಾರಿಯಾಗಲು ಮೂವರು ಪ್ರಮುಖವಾಗಿ ಸ್ಪರ್ಧೆಯಲ್ಲಿದ್ದಾರೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆ.
ಅವರೆಂದರೆ : ದಾವೂದ್ ಪುತ್ರ ಮೊಯೀನ್ ನವಾಜ್ ಮತ್ತು ಅಳಿಯ ಜುನೈದ್ ಮಿಯಾಂದಾದ್. ಇದಲ್ಲದೆ ಛೋಟಾ ಶಕೀಲ್ ಕೂಡ ರೇಸ್‌ನಲ್ಲಿದ್ದಾರೆ. ಪುತ್ರ ಜುನೈದ್‌ಗೆ ಉತ್ತಾರಾಧಿಕಾರಿ ಪಟ್ಟ ಕಟ್ಟಬೇಕೆಂಬ ಆಸೆ ದಾವೂದ್‌ಗಿದೆ. ಆದರೆ ಆತ ತುಂಬಾ ಮೃದು
ಎಂಬುದು ಡಿ ಕಂಪನಿಯ ಅಭಿಪ್ರಾಯ. ಆದರೆ ಇದಕ್ಕೆ ವಿರುದ್ಧವಾಗಿ ಜುನೈದ್ ವ್ಯವಹಾರ ಚತುರ, ಧಾಡಸಿ ಪ್ರವೃತ್ತಿ ಉಳ್ಳವ. ಇವರ ಜತೆಗೆ ದಾವೂದ್‌ನ ಇಬ್ಬರು ಸೋದರರಾದ ಅನೀಸ್ ಮತ್ತು ಮುಸ್ತಾಕ್ವಿಮ್ ಕೂಡ ರೇಸ್‌ನಲ್ಲಿದ್ದಾರೆ.
ಹೀಗೆ ಮೋಯೀನ್, ಜುನೈದ್, ಶಕೀಲ್, ಅನೀಸ್ ಮತ್ತು ಮುಸ್ತಾಕ್ವಿಮ್- ಈ ಐವರ ಹೆಸರು ದಾವೂದ್ ನ ಉತ್ತರಾಧಿಕಾರಿ ಸ್ಥಾನಕ್ಕೆ ಕೇಳಿಬರುತ್ತಿದೆ. ಈಗ ಇದು ಕೊನೆಯ ಘಟ್ಟ ತಲುಪಿದೆ. ದಾವೂದ್‌ನ ಸಾಮ್ರಾಜ್ಯ ಛಿದ್ರವಾಗಲೂಬಹುದು ಇಲ್ಲವೆ ಉತ್ತರಾಧಿ ರತ್ವಕ್ಕಾಗಿ ಭೀಕರ ಸಂಘರ್ಷ ಉಂಟಾಗಬಹುದು. ಇದನ್ನು ಅರಿತೇ ದಾವೂದ್‌ನ ಬಂಟರು ತಮಗೆ ಬೇಕಾದವರ ಜತೆ ಗುರುತಿಸಿ ಕೊಳ್ಳತೊಡಗಿದ್ದಾರೆ. ಇಲ್ಲವೆ ತಮ್ಮ ಪಾಲಿನ ವಿಭಾಗವನ್ನು ಹಂಚಿಕೊಳ್ಳಲು ಹವಣಿಸುತ್ತಿದ್ದಾರೆ. ಕೊನೆಗೆ ಹೊರಹೋಗುವ ಬಗೆಗೂ ವಿಚಾರ ಮಾಡುತ್ತಿದ್ದಾರೆ.
ಮೊಯೀನ್ ಈಗಾಗಲೇ ತಿಳಿಸಿರುವ ಹಾಗೆ ಮಗ ಮೊಯೀನ್ ತನ್ನ ಉತ್ತರಾಧಿಕಾರಿ ಆಗಬೇಕೆಂಬ ಪ್ರಬಲ ಇಚ್ಛೆ ದಾವೂದ್
ಗಿದೆ. ಐಎಸ್‌ಐಗೂ ಇದೇ ಬಯಕೆ ಇದೆ. ಆದರೆ ಆತ ಧಾರ್ಮಿಕ ಮನೋಭಾವದವನಾಗಿದ್ದ ಅಪ್ಪನಷ್ಟು ವ್ಯವಹಾರಸ್ಥನಲ್ಲ ಎಂಬುದೇ ಎಲ್ಲರ ಚಿಂತೆ. ಆದರೂ ಆತನನ್ನು ಪಾಕಿಸ್ತಾನದ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಲು ಐಎಸ್‌ಐ ಯತ್ನಿಸುತ್ತಿದೆ. ಇತ್ತ ಮೊಯೀನ್, ಪಾಕ್‌ನ ಆಚೆ ತನ್ನ ಬಿಸಿನೆಸ್ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾನೆ. ಹೊರದೇಶಗಳಲ್ಲಿ ಸಾಕಷ್ಟು ಆಸ್ತಿ
ಸಂಪಾದಿಸಿದ್ದು, ಹೂಡಿಕೆಯನ್ನೂ ಮಾಡಿದ್ದಾನೆ. ಪತ್ನಿ ಲಂಡನ್‌ನಲ್ಲಿದ್ದು ಆಗಾಗ ಅಲ್ಲಿಗೆ ಭೇಟಿ ನೀಡುತ್ತಿರುತ್ತಾನೆ.
ಜುನೈದ್
ಮೊಯೀನ್‌ನ ಮುಖ್ಯ ಪ್ರತಿಸ್ಪರ್ಧಿಯಾಗಿರುವ ಜುನೈದ್ ಸುಶಿಕ್ಷಿತ, ಚತುರ. ಆತ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್‌ನ ಮಗ. ದಾವೂದ್‌ಗೆ ಹತ್ತಿರದವನಾಗಿದ್ದು ಉತ್ತರಾಧಿಕಾರಿ ಅವನೇ ಎಂದು ಭಾವಿಸಿರುವುದುಂಟು. ಆದರೆ ಜುನೈದ್ ಹಾಗೂ ಪತ್ನಿಯ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ. ಮೊಯೀನ್‌ಗೆ ಇದರ ಬಗೆಗೂ ಅರಿವಿದೆ. ಜತೆಗೆ ಡಿ ಕಂಪನಿಯಲ್ಲಿ ಅನೇಕರೂ ಜುನೈದ್ ಹೊರಗಿನವನು ಎಂಬ ಅಭಿಪ್ರಾಯ ಹೊಂದಿದ್ದಾರೆ.
ಅನೀಸ್, ಮುಸ್ತಾಕ್ವಿಮ್ ತಾವೇ ದಾವೂದ್‌ನ ನೈಜ ಉತ್ತರಾಧಿಕಾರಿಗಳು ಎಂಬುದು ಆತನ ಈ ಇಬ್ಬರು ಸೋದರರ ಪ್ರತಿಪಾದನೆ. ದಾವೂದ್‌ನ ಸುಖ ದುಃಖ ಎರಡರಲ್ಲೂ ಭಾಗಿಯಾಗಿಯಾಗಿರುವ ಅವರಿಗೆ ಡಿ ಸಾಮ್ರಾಜ್ಯದ ಅಧಿಕಾರ, ಹೊರಗಿನವರ ಪಾಲಾಗುವುದು ಇಷ್ಟವಿಲ್ಲ. ಮುಸ್ತಾಕ್ವೀಮ್ ಆಮದು ರಫ್ತು ಬಿಸಿನೆಸ್ ನೋಡಿಕೊಳ್ಳುತ್ತಿದ್ದಾನೆ. ದುಬೈನಲ್ಲಿ ಮಾದಕವಸ್ತು
ವ್ಯವಹಾರವನ್ನೂ ನಡೆಸುತ್ತಿದ್ದಾನೆ. ಅನೀಸ್ ಗುಟ್ಕಾ ಮತ್ತು ಪೇಪರ್ ವ್ಯವಹಾರ ಹೊಂದಿದ್ದಾನೆ. ಖೋಟಾ ನೋಟುಗಳ ಮುದ್ರಣ ಮತ್ತು ವಿತರಣೆ ಇವನ ಕೈಲಿದೆ.
ಛೋಟಾ ಶಕೀಲ್
ದಾವೂದ್‌ಗೆ ಎಲ್ಲರಿಗಿಂತ ಛೋಟಾ ಶಕೀಲ್ ಮೇಲೆ ಪ್ರೀತಿ, ವಿಶ್ವಾಸ ಒಂದು ತೂಕ ಜಾಸ್ತಿ. ಇದು ಭಾರತದ ಗುಪ್ತಚರ ಇಲಾಖೆಗೆ ತಲೆನೋವಿನ ಸಂಗತಿ. ಏಕೆಂದರೆ ಆತ ದಾವೂದ್ ಬಂಗಲೆಯ ಬಳಿಯಲ್ಲೇ ವಾಸಿಸುತ್ತಿದ್ದು, ಐಎಸ್‌ಐ ಜತೆ ನಂಟಿದೆ. ಹೀಗಾಗಿ
ಇದನ್ನೆಲ್ಲ ಚೆನ್ನಾಗಿ ನಿಭಾಯಿಸಬಲ್ಲ. ಡಿ ಕಂಪನಿಯಲ್ಲೂ ಶಕೀಲ್‌ನೇ ದಾವೂದ್‌ನ ಉತ್ತರಾಧಿಕಾರಿಯಾಗಬಹುದು ಎಂಬ ಭಾವನೆ ಇದೆ. ಏಕೆಂದರೆ ದಶಕಗಳಿಂದ ಆತ ದಾವೂದ್‌ನ ಬಲಗೈ ಬಂಟನಾಗಿದ್ದು, ಈ ಸಾಮ್ರಾಜ್ಯದ ಒಳಹೊರಗನ್ನು
ಬಲ್ಲವನಾಗಿದ್ದಾನೆ. ಐಎಸ್‌ಐಗೂ ಕೂಡ ಛೋಟಾ ಶಕೀಲ್ ಮೇಲೆಯೇ ಮಮತೆ.
ದಾವೂದ್ ಇಬ್ರಾಹಿಂ ವಂಶವೃಕ್ಷ
ಇಬ್ರಾಹಿ ಕಸ್ಕರ್(೧೯೮೭ ರಲ್ಲಿ ನಿಧನ)-ಅಮೀನಾ ಕಸ್ಕರ್ (೧೯೯೯ರಲ್ಲಿ ನಿಧನ)
ಗಂಡು ಮಕ್ಕಳು
ದಾವೂದ್ ಇಬ್ರಾಹಿಂ; ಸಬೀರ ಕಸ್ಕರ್(ಮುಂಬೈನಲ್ಲಿ ನಿಧನ); ನುರುಲ್ ಹಕ್ ಕಸ್ಕರ್ (ನಿಧನ); ಇಕ್ಬಾಲ್ ಕಸ್ಕರ್ (ಠಾಣೆ); ಅನಿಸ್ ಕಸ್ಕರ್ (ಕರಾಚಿ);ಮುಸ್ತಾಕಿಮ್ ಕಸ್ಕರ್(ದುಬೈ); ಹುಮಾಯೂನ್ ಕಸ್ಕರ್(ಕರಾಚಿಯಲ್ಲಿ ನಿಧನ); ಸಲೀಂ ಕಸ್ಕರ್ (ಭಾರತದಲ್ಲಿ ನಿಧನ);
ಹೆಣ್ಣು ಮಕ್ಕಳು
ಶಹೀದಾ (ಭಾರತದಲ್ಲಿ ನಿಧನ); ಹಸೀನಾ (ಭಾರತದಲ್ಲಿ ನಿಧನ); ಝೈತುನ್ (ದುಬೈ); ಮುಮ್ತಾಜ್ (ಕರಾಚಿ); ಫರ್ಜಾನಾ(ಮುಂಬೈ) ದಾವೂದ್ ಇಬ್ರಾಹಿಂ-ಮಝಬೀನ್ ಶೇಖ್ (ಪತ್ನಿ) ಮೊಯೀನ್ ನವಾಜ್(ಮಗ)-ಸಾನಿಯಾ ಮೊಯೀನ್
ಶೇಖ್(ಪತ್ನಿ) ಮಹರುಖ್ (ಪುತ್ರಿ)-ಜುನೈದ್ ಮಿಯಾಂದಾದ್(ಪತಿ) ಮೆಹರೀನ್(ಪುತ್ರಿ)-ಔರಂಗ್‌ಜೇಬ್ ಮೆಹಬೂಬ್(ಪತಿ)
ನಾಜಿಯಾ ಶೇಖ್ (ಪುತ್ರಿ).