ನಾನು ಯೋಗೇಶ್ವರ್ ಲೆವೆಲ್ಗೆ ಇಳಿಯಲ್ಲ, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ: ಹೆಚ್.ಡಿ. ಕುಮಾರಸ್ವಾಮಿ
ರಾಮನಗರ: ಕಳೆದ ಕೆಲದಿನಗಳಿಂದ ಯೋಗೇಶ್ವರ್ ಹಾಗೂ ಹೆಚ್ಡಿಕೆ ನಡುವೆ ಮಾತಿನ ಯುದ್ಧ ನಡೆಯುತ್ತಿದೆ. ಜೊತೆಗೆ ಕುಮಾರಸ್ವಾಮಿ ಇಸ್ಪೀಟ್ ಆಡಿರುವ ವಿಡಿಯೋ ಇದೆ, ಸಿಡಿ ಬಿಡುಗಡೆ ಮಾಡುತ್ತೇನೆಂದು ಯೋಗೇಶ್ವರ್ ಹೇಳಿಕೆಯನ್ನ ಇತ್ತೀಚೆಗೆ ನೀಡಿದ್ದಾರೆ. ಈ ವಿಚಾರವಾಗಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ. ಚನ್ನಪಟ್ಟಣ ಇಲ್ಲಾಂದ್ರೆ ಎಲ್ಲಾದರೂ ಬರಲಿ. ರಾಜಕಾರಣ ಮಾಡೋದು ನನಗೆ ಗೊತ್ತಿದೆ. ಯೋಗೇಶ್ವರ್ ಲೆವೆಲ್ಗೆ ನಾನು ಇಳಿಯಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಆ ಸವಾಲ್ ಅನ್ನ ನನ್ನ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ, ನಾನು ಚನ್ನಪಟ್ಟಣದಲ್ಲಿ ಅರ್ಜಿ ಹಾಕಿ ಬಂದಿದ್ದೆ. ನಾನು ಗೆಲ್ಲಲಿಲ್ಲವಾ? ಹಾಗಾಗಿ ಈ ರೀತಿಯ ಹೇಳಿಕೆಗಳನ್ನ ನನಗೆ ಕೊಡಬೇಡಿ ಎಂದು ಸಚಿವ ಸಿ.ಪಿ. ಯೋಗೇಶ್ವರ್ಗೆ ಹೆಚ್ಡಿಕೆ ಟಾಂಗ್ ಕೊಟ್ಟರು. ಇನ್ನು ಸಚಿವ ಬಿ.ಸಿ. ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನ ಮನೆಗೆ ಕರೆಸಿ ವ್ಯಾಕ್ಸಿನ್ ತೆಗೆದುಕೊಂಡ ವಿಚಾರಕ್ಕೆ ಮಾತನಾಡಿ, ಈ ಸರ್ಕಾರದಲ್ಲಿ ಯಾರು ಏನ್ ಬೇಕಾದರೂ ಮಾಡಬಹುದು ಬನ್ನಿ ಎಂದು ವ್ಯಂಗ್ಯ ಮಾಡಿದರು.
ರಾಮನಗರದ ನೂತನ ಡಿಹೆಚ್ಓ ಆಫೀಸ್ನ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಕುಮಾರಸ್ವಾಮಿ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅವರ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಇದ್ದರು.
ಕುಮಾರಸ್ವಾಮಿ ಜನಬೆಂಬಲಕ್ಕೆ ಬೆಚ್ಚಿದ ಯೋಗೇಶ್ವರ್:
ಸದ್ಯ ಚನ್ನಪಟ್ಟಣದ ಶಾಸಕರಾಗಿ ಹೆಚ್.ಡಿ. ಕುಮಾರಸ್ವಾಮಿ ಇದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ರಾಜ್ಯದ ಮುಖ್ಯಮಂತ್ರಿಯೂ ಆದರು. ಜೊತೆಗೆ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಚನ್ನಪಟ್ಟಣದ ಅಭಿವೃದ್ಧಿಗೆ ಯಾವುದೇ ಅಡ್ಡಿಯಾಗಲಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಸಂಪುಟದ ಸಚಿವರು ಕುಮಾರಸ್ವಾಮಿಯವರ ಎಲ್ಲಾ ಪತ್ರಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡ್ತಿದ್ದಾರೆ. ಯೋಗೇಶ್ವರ್ ಕಾಲದಲ್ಲಿ ಆಗದ ಎಷ್ಟೋ ಕೆಲಸಗಳು ಈಗ ಕುಮಾರಸ್ವಾಮಿ ಮಾಡ್ತಿದ್ದಾರೆ. ಈ ಕಾರಣ ಕ್ಷೇತ್ರ ಕೈತಪ್ಪುವ ಹಿನ್ನೆಲೆ ಯೋಗೇಶ್ವರ್ ಹೆಚ್ಡಿಕೆ ವಿರುದ್ಧ ಕಿಡಿಕಾರುತ್ತಿದ್ದಾರೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅನಿಸಿಕೆ.
ಸಚಿವ ಸಿ.ಪಿ. ಯೋಗೇಶ್ವರ್ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದಂತೆ ಜೆಡಿಎಸ್ ಪಕ್ಷದ ಶಾಸಕರು, ವಿಧಾನಪರಿಷತ್ನ ಸದಸ್ಯರು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು. ಸರಣಿ ಟ್ವೀಟ್ ಮೂಲಕ ಯೋಗೇಶ್ವರ್ಗೆ ಎಚ್ಚರಿಕೆ ನೀಡಿದರು. ಆದರೆ ಯೋಗೇಶ್ವರ್ ಪರವಾಗಿ ಅವರ ಪಕ್ಷದ ನಾಯಕರೇ ಒಬ್ಬರೂ ಬಾಯಿಬಿಡಲಿಲ್ಲ. ಯೋಗೇಶ್ವರ್ ಪರವಾಗಿ ಕುಮಾರಸ್ವಾಮಿ ದೂರುವ ಕೆಲಸಕ್ಕೆ ಯಾರೂ ಮುಂದಾಗಲಿಲ್ಲ. ಈ ಹಿನ್ನೆಲೆ ಯೋಗೇಶ್ವರ್ಗೆ ಸ್ವಪಕ್ಷದಲ್ಲೇ ಬೆಂಬಲವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಎಷ್ಟೇ ಆದರೂ ಯೋಗೇಶ್ವರ್ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿಲ್ಲ, ಸೋತರು ಸಹ ಮಂತ್ರಿಯಾದರಲ್ಲ ಎಂದು ಅದೆಷ್ಟೋ ಬಿಜೆಪಿ ಪಕ್ಷದ ಹಿರಿಯ ಶಾಸಕರು ಬೇಸರಗೊಂಡಿರುವುದು ವಾಸ್ತವ.