ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ: ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆ, ಸರ್ಕಾರ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜು

ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಗುರುವಾರದಿಂದ ಆರಂಭವಾಗುತ್ತಿದ್ದು. ಈ ಬಾರಿ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದ್ದು, ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಕ್ರಮ ಗಣಿಗಾರಿಕೆ, ಕುಡಿಯುವ ನೀರು, ಜಾನುವಾರುಗಳ ಮೇವು, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಬಜೆಟ್ ಅಧಿವೇಶನ ದಲ್ಲಿ ಪ್ರತಿಧ್ವನಿಸಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

ಪ್ರತಿಪಕ್ಷಗಳ ಕೈಗೆ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಸಿದ್ದೆನ್ನಲಾದ ಸಿಡಿ ಆರೋಪದ ವಿಚಾರವು ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.

ಅಧಿವೇಶನ ಕುರಿತು ಮಾಹಿತಿ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಮಾ. 4ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ 2 ದಿನ ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಮಾ. 8ರಂದು ಬಜೆಟ್‌ ಮಂಡನೆಯಾಗಲಿದ್ದು, ಅನಂತರ ಮಾ. 31ರ ವರೆಗೆ ಬಜೆಟ್‌ ಮೇಲಿನ ಚರ್ಚೆ, ಸರಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ ಎಂದು ಹೇಳಿದ್ದಾರೆ.

ಲೇವಾದೇವಿ ತಿದ್ದುಪಡಿ ಕಾಯ್ದೆ ಸೇರಿ ಮೂರು ಮಸೂದೆಗಳು ಮಂಡನೆ ಯಾಗಲಿವೆ. ಒಟ್ಟು 19 ದಿನ ಕಲಾಪ ನಡೆಯಲಿದೆ. ಕೊರೊನಾ ಸಂಪೂರ್ಣ ನಿವಾರಣೆಯಾಗಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಅಧಿವೇಶನ ನಡೆಸಬೇಕಾಗಿದೆ. ಆರೋಗ್ಯ ಸಮಸ್ಯೆ ಇರುವ ಶಾಸಕರು ಅಧಿವೇಶನಕ್ಕೆ ಬರುವುದು ಬೇಡ. ಅಧಿಕಾರಿ- ಸಿಬ್ಬಂದಿ ಈ ಬಗ್ಗೆ ಎಚ್ಚರ ವಹಿಸಬೇಕು. ಅಧಿವೇಶನಕ್ಕೆ ಬಂದಾಗ ಆರೋಗ್ಯ ಸಮಸ್ಯೆ ಎದುರಾದರೆ ತಪಾಸಣೆ ಮತ್ತು ತುರ್ತು ಚಿಕಿತ್ಸೆಗೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದರೊಂದಿಗೆ ಅಧಿವೇಶನ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ರಾಜ್ಯ ಆಯವ್ಯಯ ಮಂಡನೆ ಮಾಡಲಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *