ಸೆಕ್ಸ್ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
ಬೆಂಗಳೂರು: ಸೆಕ್ಸ್ ವಿಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಬುಧವಾರ ವಜುಭಾಯಿ ವಾಲಾ ಅವರು ಅಂಗೀಕರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರು ಸಾರ್ವತ್ರಿಕವಾಗಿ ಕೇಳಿ ಬಂದ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು. ತಕ್ಷಣವೇ ರಾಜೀನಾಮೆ ಅಂಗೀಕಾರ ಮಾಡುವಂತೆ ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಮಂಗಳವಾರ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಪೋಲೀಸ್ ಆಯುಕ್ತರಿಗೆ ದೂರು ನೀಡಿದ ಸ್ವಲ್ಪ ಹೊತ್ತಿನಲ್ಲೇ ರಾಸಲೀಲೆಯ ವಿಡಿಯೋ ದೆಹಲಿಯಲ್ಲಿದ್ದ ಪಕ್ಷದ ವರಿಷ್ಟರಿಗೆ ತಲುಪಿತು. ವರಿಷ್ಠರ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ತಮ್ಮ ಹುದ್ದೆ ತ್ಯಜಿಸಿದ್ದಾರೆ.
ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಮುಜುಗರದಿಂದ ತಪ್ಪಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಈ ತೀರ್ಮಾನ ಕೈಗೊಂಡಿದ್ದಾರೆ.
ರಾಜೀನಾಮೆ ಪತ್ರ ನೀಡಲು ನೀಡಲು ಆಗಮಿಸಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಮಾಧಾನ ಹೇಳಿದ್ದಾರೆ. ತನಿಖೆ ನಡೆದ ನಂತರ ರಮೇಶ್ ಜಾರಕಿಹೊಳಿ ತಪ್ಪಿತಸ್ಥರಲ್ಲ ಎಂಬುದು ಸಾಬೀತಾದರೆ ಮರಳಿ ಸಚಿವ ಸಂಪುಟಕ್ಕೆ ಸೇರಲಿ.ಅವರು ನಿರ್ದೋಷಿ ಎಂಬುದು ಸಾಬೀತಾದರೆ ಒಂದು ದಿನವೂ ತಡಮಾಡದೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.