ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು, ನತದೃಷ್ಟ ಸಿಎಂ ಸಿಕ್ಕಿರೋದು ರಾಜ್ಯದ ದುರ್ದೈವ: ಸಿಎಂ ಇಬ್ರಾಹಿಂ
ಮೈಸೂರು: ಪರಸತಿ, ಪರಧನ ಮತ್ತು ರಾಸಲೀಲೆ, ರಸಲೀಲೆ ಹಾಗೂ ರ್ಮಕಾಂಡಗಳ ನಡುವೆ ರಾಜಕಾರಣ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಇಬ್ರಾಹಿಂ, ಕರ್ನಾಟಕಕ್ಕೆ ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ದುರ್ದೈವ. ಸಿಎಂಗೆ ತಕ್ಕ ಸಹಪಾಠಿ ಮಂತ್ರಿಗಳಿದ್ದಾರೆ. ಇವರ ಮಧ್ಯೆ ಕೇಶವ ಕೃಪ, ಬಸವರ ಕೃಪ ಒದ್ದಾಡುತ್ತಿವೆ. ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ನಾಟಿ ತಳಿಗಳು ಸಿಕ್ತಾ ಇಲ್ಲ. ಮರ್ಯಾದಸ್ಥರು ಸಿಗೋದು ವಿರಳವಾಗಿದೆ ಎಂದು ಲೇವಡಿ ಮಾಡಿದ್ದಾರೆ
ಇದು ದಿಕ್ಕತಪ್ಪಿನ ರಾಜಕಾರಣ, ಹಿಂದಿನ ಕಾಲದಲ್ಲಿ ಜನ ಓಟು ಕೊಡಬೇಕಾದ್ರೆ ಕುಲ ಕಸಬು ನೋಡೋರು. ನಾವು ಸಹ ಒಂದು ಎತ್ತು ತಗೋಬೇಕಾದರೂ ಅದರ ತಳಿ ಯಾವುದು ಅಂತ ನೋಡ್ತೇವೆ, ರೇಸ್‌ನಲ್ಲಿ ಈ ಕುದುರೆಗೆ ದುಡ್ಡು ಕಟ್ಟೋಕು ಮುನ್ನ ಅದರ ಅಪ್ಪ ಅಮ್ಮ ಎಷ್ಟು ರೇಸ್ ಗೆದ್ದಿವೆ ಅಂತ ನೋಡುತ್ತೇವೆ. ಆದರೆ ಈಗೀನ ರೇಸ್‌ಗಳು ಎಷ್ಟು ದುಡ್ಡು ತಂದಿದ್ದಾರೆ ಅಂತ ಮಾತ್ರ ನೋಡ್ತಾರೆ. ಈಗಿನ ರಾಜಕಾರಣ ಹಾಳಾಗೋಗಿದೆ. ಇದು ಸರಿಯಾಗುತ್ತೆ ಅನ್ನೊ ನಂಬಿಕೆ ಇಲ್ಲ. ಆದ್ರೆ ಇದಕ್ಕಾಗಿ ಒಂದು ದೊಡ್ಡ ಕ್ರಾಂತಿ ಆಗಬೇಕಿದೆ. ಆ ಕ್ರಾಂತಿ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..