ಪೆಟ್ರೋಲ್ ಬಂಕ್‌ಗಳಿಂದ ಮೋದಿ ಭಾವಿಚಿತ್ರವಿರುವ ಜಾಹೀರಾತು ತೆರವಿಗೆ ಚುನಾವಣಾ ಆಯೋಗ ಆದೇಶ!
ಹೈಲೈಟ್ಸ್:
- ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಧಾನಿ ಮೋದಿ ಭಾವಿಚಿತ್ರವಿರುವ ಜಾಹೀರಾತು ತೆರವಿಗೆ ಚುನಾವಣಾ ಆಯೋಗ ಆದೇಶ.
- ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ಆದೇಶ.
- ಮುಂದಿನ 72 ಗಂಟೆಗಳಲ್ಲಿ ಪ್ರಧಾನಿ ಮೋದಿ ಭಾವಿಚಿತ್ರವಿರುವ ಜಾಹೀರಾತು ತೆರವುಗೊಳಿಸುವಂತೆ ಆಯೋಗದ ಆದೇಶ.
- ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಧಾನಿ ಮೋದಿ ಭಾವಿಚತ್ರವುಳ್ಳ ಜಾಹೀರಾತು ಇರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದ ಆಯೊಗ.
ಕೋಲ್ಕತ್ತಾ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಕೇವಲ ರಾಜಕೀಯ ಪಕ್ಷಗಳ ಸದ್ದು ಮಾತ್ರ ಕೇಳಿ ಬರುತ್ತಿಲ್ಲ. ಬದಲಿಗೆ ಭಾರತೀಯ ಚುನಾವಣಾ ಆಯೋಗದ ಧ್ವನಿ ಕೂಡ ಕೇಳಿ ಬರುತ್ತಿದೆ.
ಇದಕ್ಕೆ ಸಾಕ್ಷಿಯಾಗಿ ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಹಾಕಿರುವ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನೊಳಗೊಂಡ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಚುನಾವಣಾ ಸಮಯದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಜಾಹೀರಾತು ಇರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಕಾರಣಕ್ಕೆ ಮುಂದಿನ 72 ಗಂಟೆಗಳಲ್ಲಿ ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್‌ಗಳಿಂದ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಜಾಹೀರಾತು ಹೋರ್ಡಿಂಗ್‌ಗಳನ್ನು ತೆರವುಗೊಳಿಸುವಂತೆ ಚುನಾವಣಾ ಆಯೋಗ ಆದೇಶ ಜಾರಿ ಮಾಡಿದೆ.
ಇದಕ್ಕೂ ಮೊದಲು ಬಿಜೆಪಿ ರಾಜ್ಯದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನೊಳಗೊಂಡ ಹೋರ್ಡಿಂಗ್‌ಗಳನ್ನು ಹಾಕಿರುವುದನ್ನು ಆಕ್ಷೇಪಿಸಿ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೇಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಚುನಾವಣಾ ನೀತಿ ಸಂಹಿತೆಗಳನ್ನು ಗಾಆಳಿಗೆ ತೂರುತ್ತಿದೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.