ರಾಜ್ಯ ಬಜೆಟ್​​ಗೆ ಕೌಂಟ್​ಡೌನ್, ಮೈಸೂರಿಗೆ ನಿರೀಕ್ಷೆಗಳ ಮಹಾಪೂರ!

ಹೈಲೈಟ್ಸ್‌:

  • ಮಾರ್ಚ್ 8ಕ್ಕೆ ಆಯವ್ಯಯ ಮಂಡನೆ ಮೈಸೂರಿಗೆ ಸಾಕಷ್ಟು ನಿರೀಕ್ಷೆ
  • ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಮನವಿ, ಅಗತ್ಯ ಸೌಕರ್ಯಗಳನ್ನ ಬಜೆಟ್ನಲ್ಲಿ ಮಂಜೂರು ಮಾಡುವಂತೆ ಒತ್ತಾಯ
  • ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಮಂಡಿಸಲಿರುವ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರ

ಮೈಸೂರು: ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಹ ಒಂದು. ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಚಟುವಟಿಕೆಗಳಿಗೂ ಮೈಸೂರೇ ವೇದಿಕೆ ಎಂದರೆ ತಪ್ಪಾಗಲಾರದು. ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಅರಮನೆಗಳ ನಗರಿಗೆ ಪ್ರವಾಸೋದ್ಯಮವೇ ಜೀವಾಳ. ಮಾರ್ಚ್ 8ಕ್ಕೆ ಆಯವ್ಯಯ ಮಂಡನೆಯಾಗುತ್ತಿದ್ದು, ಮಲ್ಲಿಗೆ ನಗರಿ ಮೈಸೂರಿಗೆ ಏನು ಸಿಗುತ್ತೆ ಅನ್ನೋದೆ ಸದ್ಯದ ಕುತೂಹಲವಾಗಿದೆ.

ಹೀಗೆ, ಅಭಿವೃದ್ಧಿಯತ್ತ ದಾಪುಗಾಲಿಟ್ಟಿರುವ ಮೈಸೂರಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಇಂದಿಗೂ ಬಾಕಿ ಉಳಿದಿದ್ದು, ಮೈಸೂರಿಗರ ವರ್ಷಗಳ ಬೇಡಿಕೆಗಳು ಈವರೆಗಿನ ಹಲವು ಬಜೆಟ್ ಗಳಲ್ಲಿ ಈಡೇರಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಮಂಡಿಸಲಿರುವ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ಇದೆ.

ಹಲವು ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿರುವ ಮೈಸೂರು ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದೆ. ಇದೇ ಕಾರಣಕ್ಕಾಗಿ ಪ್ರತಿ ಬಜೆಟ್‍ ಸಂದರ್ಭದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ಅದರಂತೆ ಈ ವರ್ಷವೂ ಸಹ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆಗಳು ಕೇಳಿಬಂದಿವೆ.

ಈ ವರ್ಷದ ಬಜೆಟ್ ನಿರೀಕ್ಷೆಗಳ ಕುರಿತು ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ವಿಶ‍್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾದಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಕೋವಿಡ್-19 ಸೋಂಕಿನ ಆತಂಕ ಎದುರಾಗಿ ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಹೋಟೆಲ್ ಉದ್ಯಮಕ್ಕೆ ಯಾವುದೇ ಪ್ರೋತ್ಸಾಹ ಸಹ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಹೋಟೆಲ್ ಉದ್ಯಮದ ಅಭಿವೃದ್ಧಿಗೆ ಅನುಗುಣವಾಗಿ ಕೆಲವೊಂದು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರಮುಖವಾಗಿ, ಕೊರೊನಾದಿಂದ ಹೋಟೆಲ್ ಉದ್ಯಮ ನೆಲಕಚ್ಚಿದ್ದು, ಹೀಗಾಗಿ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ 2 ವರ್ಷ ಕಂದಾಯ ರದ್ದುಪಡಿಸಬೇಕು. ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ಸಹ ಪ್ರವಾಸಿ ಬಸ್ಸುಗಳಿಗೆ ಏಕರೂಪ ತೆರೆಗೆ ವ್ಯವಸ್ಥೆ ಜಾರಿಗೊಳಿಸಬೇಕು, ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ನೌಕರರ ತರಬೇತಿ ಕೇಂದ್ರ ಆರಂಭಿಸುವುದು ಹಾಗೂ ಐಷಾರಾಮಿ ಹೋಟೆಲ್ ಗಳ ಕೈಗಾರಿಕಾ ಸ್ಥಾನಮಾನ ನೀಡಬೇಕಿದೆ. ಜತೆಗೆ ಐದು ಜಿಲ್ಲೆಗಳನ್ನು ಒಳಗೊಂಡ ಪ್ರವಾಸೋದ್ಯಮ ಪ್ರಾಧಿಕಾರ ರಚನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿ ನೇಮಿಸುವಂತೆ ಸಹ ಸರ್ಕಾರವನ್ನು ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *