ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಈಗೆಲ್ಲಿದ್ದಾರೆ?: ಡಿಕೆಶಿ-ಬಾಲಚಂದ್ರ ಜಾರಕಿಹೊಳಿ ಆಪ್ತ ಮಾತುಕತೆ, ಕೇಸಿನ ಸುತ್ತ ಅನುಮಾನದ ಹುತ್ತ
ಬೆಂಗಳೂರು: ಸೆಕ್ಸ್ ಸಿಡಿ ಪ್ರಕರಣ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಜಲಸಂಪನ್ಮೂಲ ಸಚಿವ ಖಾತೆಗೆ ರಾಜೀನಾಮೆ ನೀಡಿರುವ ಬೆಳಗಾವಿಯ ‘ಸಾಹುಕಾರ’ ರಮೇಶ್ ಜಾರಕಿಹೊಳಿ ಈಗ ಎಲ್ಲಿದ್ದಾರೆ? ಯಾರ ಕೈಗೂ ಸಿಗುತ್ತಿಲ್ಲ, ಮೊನ್ನೆ ಮಂಗಳವಾರ ಸಿಡಿ ಬಿಡುಗಡೆಯಾದ ದಿನ ಮತ್ತು ಮರುದಿನ ರಾಜೀನಾಮೆ ನೀಡಿದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಂತರ ನಾಪತ್ತೆಯಾಗಿದ್ದಾರೆ.
ನಿನ್ನೆ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ, ಸದನದ ಕಲಾಪಕ್ಕೂ ಗೈರಾಗಿ ಎಲ್ಲಿಗೆ ಹೋಗಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಬೆಂಗಳೂರಿನ ಮನೆಯಲ್ಲಿ ಅವರು ರಹಸ್ಯವಾಗಿ ಯಾರ ಕೈಗೂ ಸಿಗದಂತೆ ಇದ್ದಾರೆ ಎಂದು ಹೇಳಲಾಗುತ್ತಿದ್ದರೂ ವಾಸ್ತವವಾಗಿ ಇಂಥ ಕಡೆಯೇ ಇದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ಕಚೇರಿಯ ಅಧಿಕೃತ ವಾಟ್ಸಾಪ್ ಗ್ರೂಪ್ ನಿಷ್ಕ್ರಿಯವಾಗಿದೆ. ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಯಾವುದೇ ಮಾಧ್ಯಮ ಕರೆಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ಮನೆಯ ಹತ್ತಿರ ಮಾಧ್ಯಮದವರನ್ನು ಬಿಡುತ್ತಲೂ ಇಲ್ಲ.
ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಅವರ ಸೋದರ ಯಮಕನಮರಡಿ ಶಾಸಕ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಕೂಡ ನಿನ್ನೆ ಸದನಕ್ಕೆ ಗೈರಾಗಿದ್ದರು. ಹಿರಿಯ ಸೋದರ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತ್ರ ನಿನ್ನೆ ಅಧಿವೇಶನಕ್ಕೆ ಹಾಜರಾಗಿದ್ದರು.
ಬಾಲಚಂದ್ರ ಜಾರಕಿಹೊಳಿಯವರು ನಿನ್ನೆ ಶಾಸಕರ ಸೀಟಿನಲ್ಲಿ ಕುಳಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆಗೆ ಖಾಸಗಿಯಾಗಿ ಮಾತನಾಡುತ್ತಿದ್ದುದು ಕಂಡುಬಂತು. ಸಿಡಿ ಬಿಡುಗಡೆ ಹಿಂದೆ ಡಿ ಕೆ ಶಿವಕುಮಾರ್ ಕೈವಾಡವಿರಬಹುದು ಎಂದು ಮೊನ್ನೆ ಹಲವರು ಮಾತನಾಡಿಕೊಳ್ಳುತ್ತಿದ್ದರು, ಆದರೆ ನಿನ್ನೆಯ ಹೊತ್ತಿಗೆ ಬಿಜೆಪಿಯೊಳಗಿರುವವರೇ ಯಾರೋ ಸಿಡಿ ಬಿಡುಗಡೆ ಮಾಡಿಸಿರಬೇಕು ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ಮಾತುಕತೆಯಾಡುತ್ತಿದ್ದುದು ನೋಡಿದರೆ ಇದರ ಬಗ್ಗೆ ಹತ್ತು ಹಲವು ಸಂಶಯಗಳು, ಆಯಾಮಗಳು ಹುಟ್ಟಿಕೊಳ್ಳುತ್ತವೆ.
ಮೊನ್ನೆ ಮಂಗಳವಾರ ಸಾಯಂಕಾಲ 4.30ರ ಹೊತ್ತಿಗೆ ಎಲ್ಲಾ ಸುದ್ದಿ ಮಾಧ್ಯಮಗಳಿಗೆ ಸಿಡಿ ಪ್ರತಿ ಲಭ್ಯವಾಗಿತ್ತು. ದೂರು ನೀಡಿದ ಆರ್ ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲು ಹೋಗುವ ತಯಾರಿಯಲ್ಲಿದ್ದರು.
ವಿಡಿಯೊ ಹಿಂದೆ ರಹಸ್ಯ ತಂಡ?: ಈ ಸಿಡಿ ತಯಾರಿ ಹಿಂದೆ ರಹಸ್ಯ ತಂಡವೊಂದು ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಹನಿಟ್ರ್ಯಾಪ್ ಮಾಡುವ ಮೂಲಕ ರಮೇಶ್ ಜಾರಕಿಹೊಳಿಯನ್ನು ಸಿಕ್ಕಿಸಿಹಾಕುವ ಯೋಜಿತ ಸಂಚು ನಡೆಸಿದೆ. ತಂಡವು ಮಂಗಳವಾರ ಸಂಜೆ ಸಿಡಿ ಬಿಡುಗಡೆ ಮಾಡಲು ಸಾಕಷ್ಟು ತಯಾರಿ ನಡೆಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.
ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ನಾವಲಿ ಸಮೀಪ ಜಲಾಶಯ ನಿರ್ಮಾಣ ಕುರಿತು ಮಾತುಕತೆ ನಡೆಸಲು ಮೊನ್ನೆ ಮಂಗಳವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ ಹಾಗೂ ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಪ್ರತಿನಿಧಿಗಳ ಮಧ್ಯೆ ಸಭೆ ಏರ್ಪಾಡಾಗಿತ್ತು.