Indian Railway: ರೈಲ್ವೆ ಪ್ರಯಾಣಿಕರ ಗಮನಕ್ಕೆ; ಇನ್ಮುಂದೆ ಪ್ಲಾಟ್​ಫಾರ್ಮ್ ಪ್ರವೇಶಿಸಲು 50 ರೂ. ಕೊಡಬೇಕು!

ಮುಂಬೈ(ಮಾ.05): ರೈಲ್ವೆ ಇಲಾಖೆಯು ಟಿಕೆಟ್ ದರ ಏರಿಸುವುದು ಸಾಮಾನ್ಯ. ಈಗ ಪ್ಲಾಟ್​ಫಾರ್ಮ್​ ಟಿಕೆಟ್​ ದರ ಏರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಹೌದು, ಕೊರೋನಾ ಎರಡನೇ ಅಲೆ ಶುರುವಾಗಿರುವ ಹಿನ್ನೆಲೆ, ಜನಸಂದಣಿ ನಿಯಂತ್ರಿಸಲು ಮುಂಬೈನ ಕೆಲವು ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್​​ಫಾರ್ಮ್​ ಟಿಕೆಟ್​​ ದರ ಏರಿಸಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹಾಗೂ ಬೇಸಿಗೆ ಆರಂಭವಾಗುತ್ತಿರುವ ಕಾರಣಕ್ಕೆ ಭಾರತೀಯ ರೈಲ್ವೆ ಇಲಾಖೆಯ ಕೇಂದ್ರೀಯ ರೈಲ್ವೆ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.

ಮುಂಬೈ ಮೆಟ್ರೋಪಾಲಿಟನ್ ರೀಜನ್(ಎಂಎಂಆರ್​) ಕೆಲವು ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಪ್ಲಾಟ್​ಫಾರ್ಮ್​ ಟಿಕೆಟ್​​​ ದರವನ್ನು ಏರಿಸಲಾಗಿದೆ. ಈ ಮೊದಲು ಪ್ಲಾಟ್​​ಫಾರ್ಮ್​ ಟಿಕೆಟ್​ ದರ 10 ರೂ.ಇತ್ತು. ಆದರೆ ಈಗ ಕೊರೋನಾ ಕಾರಣದಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸಲು, ಆ ದರವನ್ನು 50 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಕೇಂದ್ರೀಯ ರೈಲ್ವೆಯ ಸಾರ್ವಜನಿಕ ಸಂಬಂಧಗಳ ಅಧಿಕಾರಿಯಾದ ಶಿವಾಜಿ ಸುತರ್ ಈ ಕುರಿತಾಗಿ ಪಿಟಿಐ ಜೊತೆ ಮಾತನಾಡಿದ್ದಾರೆ. ‘ ಈ ಹಿಂದೆ ಪ್ಲಾಟ್​ಫಾರ್ಮ್ ಟಿಕೆಟ್​ ದರ 10 ರೂಪಾಯಿ ಇತ್ತು. ಈಗ 50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಡಾರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣಗಳಲ್ಲಿ, ಜೊತೆಗೆ ಥಾಣೆ, ಪಾನ್ವೆಲ್, ಕಲ್ಯಾಣ್ ಮತ್ತು ಭಿವಾಂಡಿ ರಸ್ತೆ ರೈಲ್ವೆ ನಿಲ್ದಾಣಗಳಲ್ಲೂ ಪ್ಲಾಟ್​ಫಾರ್ಮ್​ ಟಿಕೆಟ್ ದರ ಏರಿಸಲಾಗಿದೆ‘ ಎಂದು ತಿಳಿಸಿದ್ದಾರೆ.

ಸಿಪಿಆರ್​ಒ ಪ್ರಕಾರ, ಈ ಹೊಸ ದರ ಪರಿಷ್ಕರಣೆಯು ಕಳೆದ ಫೆಬ್ರವರಿ 24ರಿಂದ ಜಾರಿಯಾಗಿದ್ದು, 2021ರ ಜೂನ್​ 15ರವರೆಗೆ ಜಾರಿಯಲ್ಲಿರುತ್ತದೆ. ಬೇಸಿಗೆ ಶುರುವಾಗುತ್ತಿರುವ ಹಿನ್ನೆಲೆ, ಜೊತೆಗೆ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚು ಜನ ಸೇರುವುದನ್ನು ನಿಯಂತ್ರಿಸಲು ಈ ದರ ಏರಿಕೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 2ನೇ ವಾರದವರೆಗೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಮುಂಬೈ ನಗರವೊಂದರಲ್ಲೇ ಈವರೆಗೆ 3,25,000 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 11,400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಫೆಬ್ರವರಿ 1ರಿಂದ ಕೆಲವು ನಿಯಮಾವಳಿಗಳೊಂದಿಗೆ ಎಲ್ಲಾ ಸ್ಥಳೀಯ ರೈಲುಗಳ ಸಂಚಾರವನ್ನು ಆರಂಭಿಸಲಾಗಿತ್ತು. ಸುಮಾರು 320 ದಿನಗಳ ನಂತರ ರೈಲುಗಳ ಸಂಚಾರ ಶುರುವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *