ಕಲಬುರಗಿ : ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಹಾನಗಲ್ ಕೊಡುಗೆ ಮರೆಯುವಂತಿಲ್ಲ
ಕಲಬುರಗಿ : ವ್ಯಕ್ತಿಯಲ್ಲಿ ದೈಹಿಕ ಬದಲಾವಣೆಯೊಂದಿಗೆ ಮಾನಸಿಕ ಶಾಂತಿ ನೀಡುವ ಶಕ್ತಿ ಸಂಗೀತಕ್ಕಿದೆ. ಇಂದಿನ ಒತ್ತಡದ ಬದುಕಿನ ತೊಂದರೆಗೆ ಸಂಗೀತ ಆಲಿಸುವುದು ಅಗತ್ಯವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಮರೆಯುವಂತಿಲ್ಲವೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ‘ಶಾರದಾ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಗಂಗೂಬಾಯಿ ಹಾನಗಲ್ರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ನಿರಂತರವಾಗಿ ಸಂಗೀತ ಅಭ್ಯಾಸ, ಸೇವೆಯನ್ನು ಮಾಡಿದರು. ಬೆಳಗಾಂವಿ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಬಾಲ್ಯದಲ್ಲಿರುವಾಗಲೇ ಸುಮಧುರವಾಗಿ ಹಾಡುವ ಮೂಲಕ ಗಾಂಧೀಜಿ ಮೆಚ್ಚುಗೆಗೆ ಪಾತ್ರರಾಗಿದ್ದರು. ತಮ್ಮ ಸುದೀರ್ಘ ಏಳು ದಶಕಗಳ ಕಾಲ ಸಲ್ಲಿಸಿದ ಸಂಗೀತ ಸೇವೆಯನ್ನು ಪರಿಗಣಿಸಿ ಕರ್ನಾಟಕ, ಹಂಪಿ,ದೆಹಲಿ,ಗುಲಬರ್ಗಾ ವಿವಿ ಗೌರವ ಡಾಕ್ಟರೇಟ್, ಕೇಂದ್ರ ಸರ್ಕಾರ ಪದ್ಮವಿಭೂಷಣ, ಅಲ್ಲದೆ ಭಾರತಿ ಕಂಠ, ಸ್ವರ ಶಿರೋಮಣಿ, ಸಂಗೀತ ಕಲಾರತ್ನ, ಸಂಗೀತ ಸರಸ್ವತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಕೆ.ಕಲ್ಯಾಣರಾವ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸಂಗೀತ ಆಲಿಸುವ, ಹಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಇದರಿಂದ ಸ್ವಂತ ನಿಮಗೆ ಆನಂದ ಸಿಗುವುದರ ಜೊತೆಗೆ ಸಮಾಕ್ಕೂ ಕೂಡಾ ಒಂದು ಅಮೂಲ್ಯವಾದ ಕೊಡುಗೆಯನ್ನು ನೀಡಬಹುದಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಬಸವರಾಜ ಎಸ್.ಪುರಾಣೆ, ಅಮರ ಜಿ.ಬಂಗರಗಿ, ಸಿದ್ದಾರೂಢ ಬುಕ್ಕಾ, ಸಂತೋಷ ಬಿರಾದಾರ, ರಾಜೇಂದ್ರ ಕಪಾತೆ, ಸಚಿನ ಸಸ್ತಾಪುರೆ ಸೇರಿದಂತೆ ಮತ್ತಿತರರಿದ್ದರು.