ಕಲಬುರಗಿ : ವಸತಿ ನಿಲಯಗಳ ಪ್ರವೇಶಾತಿ ಪಟ್ಟಿ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕಲಬುರಗಿ : ಕೂಡಲೇ ಎಲ್ಲ ಪ್ರಥಮ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ, ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಲಾಕ್‍ಡೌನ್‍ನಿಂದ ವಿದ್ಯಾರ್ಥಿ ಸಮುದಾಯ ತುಂಬಾ ಸವಾಲುಗಳನ್ನು ಎದುರಿಸಿದೆ. ತುಂಬಲಾಗದ ಆರ್ಥಿಕ ಸಂಕಷ್ಟದ ನಡುವೆಯೂ ಹಲವಾರು ವಿದ್ಯಾರ್ಥಿಗಳು ವಸತಿ ನಿಲಯಗಳನ್ನು ನಂಬಿಕೊಂಡೇ ಶಾಲಾ, ಕಾಲೇಜುಗಳಿಗೆ ಬಂದಿದ್ದಾರೆ. ಆದಾಗ್ಯೂ, ವಾಸ್ತವದಲ್ಲಿ ವಿದ್ಯಾರ್ಥಿಗಳು ಸರಿಯಾದ ವಸತಿ ನಿಲಯಗಳ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲ ವಿದ್ಯಾರ್ಥಿಗಳು ವಸತಿ ನಿಲಯಗಳ ಸೌಲಭ್ಯ ಪಡೆಯಬೇಕೆಂಬ ದೃಷ್ಟಿಯಿಂದಲೇ ಸಮಾಜ ಕಲ್ಯಾಣ ಇಲಾಖೆಯು ವಸತಿ ನಿಲಯಗಳಿಗೆ ಅರ್ಜಿಗಳನ್ನು ಕರೆದಿದ್ದರು. ಅಂತೆಯೇ ವಸತಿ ನಿಲಯಗಳನ್ನು ಆಧರಿಸಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ವಸತಿ ನಿಲಯಗಳಿಗೆ ಅರ್ಜಿ ಕರೆದು ಒಂದು ತಿಂಗಳಾದರೂ ಸಹ ಇಲ್ಲಿಯವರೆಗೂ ವಸತಿ ನಿಲಯಗಳಿಗೆ ಆಯ್ಕೆ ಪಟ್ಟಿಯನ್ನು ಸಮಾಜ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ತುಂಬಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಭರ್ತಿ ಮಾಡಲು ವಿಳಂಬವಾಗಿದ್ದು, ಕೂಡಲೇ ಸಮಾಜ ಕಲ್ಯಾಣ ಇಲಾಖೆಯು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ವಸತಿ ನಿಲಯಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಹಣಮಂತ್ ಎಸ್.ಎಚ್., ಜಿಲ್ಲಾ ಕಾರ್ಯದರ್ಶಿ ಈರಣ್ಣ ಇಸಬಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಾಶಂಕರ್, ನಾಗರಾಜ್, ಶೀಲಾ ಬಿ.ಕೆ., ಪ್ರೀತಿ ಡಿ., ಸ್ನೇಹಾ ಕಟ್ಟಿಮನಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *