ಪೆಟ್ರೋಲ್ ಅನ್ನು ಜಿಎಸ್‌ಟಿಗೆ ಸೇರಿಸಿ ರಾಜ್ಯಗಳ ಆದಾಯ ಲಪಟಾಯಿಸುವ ಕುತಂತ್ರ ನಡೆಯುತ್ತಿದೆ: ಎಚ್‌ಡಿಕೆ ಆಕ್ರೋಶ

ಹೈಲೈಟ್ಸ್‌:

  • ತೈಲ ಬೆಲೆ ಇಳಿಕೆ ಮಾಡುವ ನೆಪದಲ್ಲಿ ಕೇಂದ್ರ ಸರ್ಕಾರ ಹುನ್ನಾರ ಇದು
  • ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ತಂದು ರಾಜ್ಯಗಳ ಆದಾಯ ಲಪಾಟಾಯಿಸುವ ತಂತ್ರ
  • ರಾಜ್ಯಗಳು ಚೆನ್ನಾಗಿದ್ದರೆ ಮಾತ್ರ ದೇಶವೂ ಚೆನ್ನಾಗಿರುತ್ತದೆ: ಎಚ್‌ಡಿಕೆ ಆಕ್ರೋಶ

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ವಿರೋಧ ವ್ಯಕ್ತ ಪಡಿಸಿದ್ದಾರೆ.

ದರ ಇಳಿಸುವ ನೆಪ ಹಿಡಿದುಕೊಂಡು ಕೇಂದ್ರ ಸರ್ಕಾರ ಇಂಥಹದ್ದೊಂದು ಹುನ್ನಾರ ರೂಪಿಸುತ್ತಿದೆ ಎಂದು ಆರೋಪಿಸಿರುವ ಅವರು ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿದರೇ ರಾಜ್ಯದ ಪಾಲಿಗೆ ಅದು ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿಎಸ್‌ಟಿಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ’ ಎಂದು ಹೇಳಿದ್ದಾರೆ.

‘ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್‌ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ. ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು ಜಿಎಸ್‌ಟಿಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ’ ಎಂದು ಎಚ್‌ಡಿಕೆ ಕಿಡಿಕಿಡಿಯಾಗಿದ್ದಾರೆ.

‘ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈ ವರೆಗೆ ಸರಿಯಾಗಿ ಕೊಟ್ಟೇ ಇಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ’ ಎಂದು ಎಚ್‌ಡಿಕೆ ಹೇಳಿದ್ದಾರೆ.

‘ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್‌ ಮಂಡಿಸಬೇಕಾಗುತ್ತದೆ. ಅಥವಾ, ಬಜೆಟ್‌ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ನುಡಿದಿದ್ದಾರೆ.

ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ, ಜಿಎಸ್‌ಟಿ ಕುಣಿಕೆ ನಮ್ಮನ್ನು ಕಾಡಲಿದೆ’ ಎಂದು ಆಗ್ರಹಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *