ಬಂಕಾಪುರ : ಪಠ್ಯೇತರ ಚಟುವಟಿಕೆಗಳಿಂದ ಸಮಾಜದ ಪರಿಪೂರ್ಣ ವ್ಯಕ್ತಿಯಾಗಿ
ಬಂಕಾಪುರ,ಮಾ 7: ಪಠ್ಯ ಪುಸ್ತಕಗಳಿಗೆಷ್ಟೇ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡುಗಿಸಿಕೊಳ್ಳುವ ಮೂಲಕ ಸಮಾ ಜದ ಪರಿಪೂರ್ಣ ವ್ಯಕ್ತಿಯಾಗಬೇಕು ಎಂದು ಶಿಗ್ಗಾವಿ ಉಪ ಖಜಾನೆ ಅಧಿಕಾರಿ ಎಚ್.ರೇವಣಪ್ಪ ಅಭಿಪ್ರಾಯಿಸಿದರು.
ಶನಿವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ನಡೆದ ಪ್ರಸಕ್ತ ವರ್ಷದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿ.ಎ. ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಜನ ಜೀವನದೊಂದಿಗೆ ಬೆರೆತು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಶಾಲಾ, ಕಾಲೇಜ, ಪರಿಸರ ಮತ್ತು ತಾನು ವಾಸಿಸುವ ಗ್ರಾಮ, ಪಟ್ಟಣ, ರಾಜ್ಯ, ಪ್ರಪಂಚದ ಪ್ರಚಲಿತ ವಿದ್ಯಮಾನಗಳನ್ನು ಅರಿತು ತನ್ನ ಓದಿನೊಂದಿಗೆ ತನಗೆ ಆಸಕ್ತಿ ಇರುವ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ, ದೈಹಿಕ, ಆರ್ಥಿಕ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಯಮುನಾ ಕೋಣೆಸರ, ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ಸತತ ಅಧ್ಯಯನಕ್ಕೆ ಮೀಸಲಿಡಬೇಕು. ಕಾಲೇಜನಲ್ಲಿ ಪಠ್ಯದ ಜತೆಗೆ ವಿವಿಧ ಪಠ್ಯೇತರ ರಂಗಗಳಲ್ಲಿ ಭಾಗವಹಿಸಲು ಸೂಕ್ತ ಅವಕಾಶ ಕಲ್ಪಿಸಲಾಗಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳನ್ನು ಹೂವು ಮತ್ತು ಪೆನ್ನು ನೀಡಿ ಸ್ವಾಗತಿಸಲಾಯಿತು. ಕಳೆದ ಸಾಲಿನ ಅಂತಿಮ ವರ್ಷದ ಬಿಎ, ಬಿಕಾಂ.ನಲ್ಲಿ ಹೆಚ್ಚು ಅಂಕ ಪಡೆದು ಕಾಲೇಜ ಪ್ರಥಮ ಸ್ಥಾನ ಪಡೆದ ಯಲ್ಲವ್ವ ಲಕ್ಷ್ಮೇಶ್ವರ, ನಾಗವೇಣಿ ತೇಲಕರ ಅವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ನಾರಾಯಣಪುರ, ಪ್ರೋ.ಡಿ.ಎಸ್.ಸೊಗಲದ ಮಾತನಾಡಿದರು. ಪ್ರೊ.ಎಸ್.ಎಚ್.ಕಡ್ಲಿ, ಪ್ರೊ.ಲುಬ್ನಾನಾಝ್, ಪ್ರೊ.ಆನಂದ ಇಂದೂರ, ಪ್ರೊ.ನಿಂಗಪ್ಪ ಕಲಕೋಟಿ, ಪ್ರೊ.ಮಂಜುನಾಥ ನಾಯ್ಕ, ಪ್ರೊ.ರಘುಪತಿ, ಪ್ರೊ.ನಾಜನೀನ್ ಹಿರೇಕುಂಬಿ, ವಿಜಯ ಗುಡಗೇರಿ, ಉಮೇಶ ಕರ್ಜಗಿ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.