ಬಹುಮುಖ ಶಿಕ್ಷಣ ಅಗತ್ಯ : ಡಾ.ತೇಜಸ್ವಿ ಕಟ್ಟಿಮನಿ
ಕಲಬುರಗಿ:ಮಾ.07: ಪ್ರಸ್ತುತ ಬಹುಮುಖ ಶಿಕ್ಷಣ ಬಹಳ ಅಗತ್ಯವಾಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಆದಿವಾಸಿ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರವಿವಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳಾಡುತ್ತಾ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಚಟುವಟಿಕೆ, ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು. ರಚನಾತ್ಮಕವಾಗಿ ಅಭಿವ್ಯಕ್ತಿಪಡಿಸುವುದನ್ನು ಕಲಿಯಬೇಕು. ಪ್ರಾಯೋಗಿಕ ಅರಿವಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳುವುದರಿಂದ ಅವರ ಕುತೂಹಲ ಹೆಚ್ಚಾಗುತ್ತದೆ ಮತ್ತು ಅವರ ಜ್ಞಾನವು ಹೆಚ್ಚುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ಸು ಕಾಣಬೇಕಾದರೆ ಮೊದಲು ಶಿಕ್ಷಕರು ಬದಲಾಗಬೇಕು. ಅವರಲ್ಲಿ ಹೊಸ ಕಲಿಕೆ, ಕ್ರೀಯಾಶೀಲತೆ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ವಿದೇಶಿ ಶಿಕ್ಷಣದ ಅಗತ್ಯವಿಲ್ಲ ನಮ್ಮ ದೇಶದಲ್ಲಿಯೇ ಕೌಶಲ್ಯಕ್ಕೆ ಏನು ಕಡಿಮೆಯಿಲ್ಲ, ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡ ಕ್ರೀಯಾಶೀಲರನ್ನು ನೋಡಿ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು. ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗದೆ ಹೊಸ ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವ ವಿದ್ಯಾರ್ಥಿಗಳಾಗಬೇಕು ಎಂದು ಸಲಹೆ ನೀಡಿದರು. ಅನೇಕ ಉದ್ದಿಮೆದಾರರ ಉದಾಹರಣೆಗಳನ್ನು ನೀಡುತ್ತಾ ಅದರಲ್ಲಿ ಈ ಭಾಗದ ಗಳಂಗಳಪ್ಪ ಪಾಟೀಲರು ಉದ್ಯಮದಲ್ಲಿ ಸಾಧಿಸಿದ ಸಾಧನೆ, ಶಿಕ್ಷಣದಲ್ಲಿ ಪೂಜ್ಯ ಡಾ.ಅಪ್ಪಾಜಿಯವರು ಸಾಧಿಸಿದ ಸಾಧನೆ, ಡಾ.ವಿಜಯಸಂಕೇಶ್ವರ ಅವರು ಸಾಧಿಸಿದ ಸಾಧನೆ ಹೀಗೆ ಹಲವಾರು ಜನರು ಹೆಚ್ಚು ಹೆಚ್ಚು ಓದಿಯೇ ದೊಡ್ಡ ಉದ್ದಿಮೆದಾರರಾಗಿಲ್ಲ ಅವರೆಲ್ಲ ಹಗಲು ರಾತ್ರಿ ದುಡಿದು, ಕ್ರೀಯಾಶೀಲತೆಯಿಂದ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನೀರಂಜನ್ ನಿಷ್ಠಿ ಅವರು ಮಾತನಾಡಿ, ಆರ್ಥಿಕವಾಗಿ, ಸಮಾಜಿಕವಾಗಿ ಸಮೃದ್ಧರಾಗಬೇಕಾದರೆ ಉತ್ತಮ ಶಿಕ್ಷಣದ ಬುನಾದಿ ಮುಖ್ಯವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಶ್ಲಾಘನೀಯವಾಗಿದೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ ಕನಸ್ಸು ಈ ಶಿಕ್ಷಣ ನೀತಿಯನ್ನು ಅವಲಂಬಿಸಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಹೊಸ ಶಿಕ್ಷಣ ನೀತಿಯನ್ನು ಮೊದಲಿನಿಂದಲೂ ಅಳವಡಿಸಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಈಗ ಶಿಕ್ಷಣ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಜತೆಗೆ ಹೊಸ ಶಿಕ್ಷಣ ಪದ್ಧತಿಯನ್ನು ಪಾಲಿಸುವುದು ಅವಶ್ಯಕವಾಗಿದೆ. ಪೂಜ್ಯ ಡಾ.ಅಪ್ಪಾಜಿಯವರು ಈ ಭಾಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದರಿಂದ ಈ ಭಾಗ ಶೈಕ್ಷಣಿಕವಾಗಿ ಬೆಳೆಯಲಿಕ್ಕೆ ಕಾರಣವಾಗುತ್ತಿದೆ ಎಂದರು.
ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ. ಇಂದಿರಾ ಶೆಟಕಾರ ಸ್ವಾಗತಿಸಿದರು, ಡಾ.ಸಿದ್ದಮ್ಮ ಗುಡೇದ್ ಅತಿಥಿ ಪರಿಚಯ ಮಾಡಿದರು, ಶ್ರೀಮತಿ ಪದ್ಮಜಾ ವೀರಶೆಟ್ಟಿ ವಂದಿಸಿದರು. ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ, ವೀರಭದ್ರ ಸ್ಥಾವರಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಡೋಣುರ, ಶರಣಬಸವ ವಿವಿ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಶ್ರೀಮತಿ ಜಾನಕಿ ಹೊಸುರ, ಡಾ. ಎಸ್.ಜಿ.ಡೊಳ್ಳೆಗೌಡರ್, ಡಾ.ಎಂ.ಆರ್.ಹುಗ್ಗಿ, ಡಾ. ಸಾರಿಕಾದೇವಿ ಕಾಳಗಿ, ಡಾ.ಸುಮಂಗಲಾರೆಡ್ಡಿ, ಡಾ.ನಾರಾಯಣರಾವ ರೋಲೆಕರ್, ಡಾ.ಎಸ್.ಎಸ್.ಪಾಟೀಲ, ಡಾ.ಎನ್.ಎಸ್.ಹೂಗಾರ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಎರಡು ಗೋಷ್ಠಿಗಳು ನಡೆದವು.