ಅಂತಾರಾಷ್ಟ್ರೀಯ ಮಹಿಳಾ ದಿನ: ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿ ಹಲವರಿಂದ ಶುಭ ಹಾರೈಕೆ

ನವದೆಹಲಿ: ಇಂದು ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನ. ವಿಶ್ವದಲ್ಲಿ ಲಿಂಗ ಸಮಾನತೆ ಸಾಧಿಸಲು ಮತ್ತು ಜೀವನದ ಎಲ್ಲ ಆಯಾಮಗಳಲ್ಲಿ ಮಹಿಳೆಯರ ಪ್ರತಿಭೆ ಪ್ರೋತ್ಸಾಹಕ್ಕೆ ಪ್ರತಿವರ್ಷ ಮಾರ್ಚ್ ೮ ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ’ನಾಯಕತ್ವದಲ್ಲಿ ಮಹಿಳೆ: ಕೋವಿಡ್ ಪ್ರಪಂಚದಲ್ಲಿ ಸಮಾನ ಭವಿಷ್ಯ ಸಾಧನೆ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.

ಭಾರತ ಸೇರಿದಂತೆ ವಿಶ್ವಾದ್ಯಂತ ಇಂದು ಮಹಿಳೆಯರ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಾನಾ ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ದೇಶದ ಗಣ್ಯರು ಮಹಿಳೆಯರಿಗೆ ಶುಭಾಶಯ ತಿಳಿಸಿದ್ದಾರೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಮಹಿಳೆಯರ ಗೌರವ, ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಪಿಸಬೇಕು. ಮಹಿಳೆಯರು ನಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.

ಉಪ ರಾಷ್ಟ್ರಪತಿ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು, ಪ್ರಪಂಚದಾದ್ಯಂತ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೊಡುಗೆಗಳಲ್ಲಿ ಮಹಿಳೆಯರ ಪಾತ್ರ ಮತ್ತು ಸಾಧನೆಗಳು ಮತ್ತು ಅವರ ಅದಮ್ಯ ಮನೋಭಾವ, ದೃಢ ನಿಶ್ಚಯ ಮತ್ತು ಅವರ ಸಾಧನೆಗಳನ್ನು ಒತ್ತಿಹೇಳುವ ಪ್ರಯತ್ನಗಳನ್ನು ಗೌರವಿಸುವ ದಿನ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನದಂದು ನಮ್ಮ ಅದಮ್ಯ ನಾರಿಶಕ್ತಿಗೆ ನಮನ. ನಮ್ಮ ರಾಷ್ಟ್ರದ ಮಹಿಳೆಯರ ಅನೇಕ ಸಾಧನೆಗಳಲ್ಲಿ ಭಾರತ ಹೆಮ್ಮೆ ಪಡುತ್ತದೆ. ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಿರುವುದು ನಮ್ಮ ಸರ್ಕಾರದ ಗೌರವವಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದು, ಭವಿಷ್ಯವನ್ನು ಅಸಾಧಾರಣಗೊಳಿಸುವ ಹಾಗೂ ಇತಿಹಾಸವನ್ನು ಸೃಷ್ಟಿಸುವ ಸಾಮರ್ಥ್ಯ ಮಹಿಳೆಯರಿಗಿದೆ. ನಿಮ್ಮನ್ನೂ ಯಾರೂ ತಡೆಯಲು ಅವಕಾಶ ನೀಡದಿರಿ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *