Siddaramaiah: ಒಟ್ಟು ಬಜೆಟ್ನಲ್ಲಿ ಶೇ 26ರಷ್ಟು ಸಾಲ; ಇದು ಆರ್ಥಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ: ಸಿದ್ದರಾಮಯ್ಯ
. ಈ ವರ್ಷದ ಬಜೆಟ್ ದಿವಾಳಿ ಬಜೆಟ್. ಬಜೆಟ್ನಲ್ಲಿ ಏನಾದರೂ ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೊಟ್ಟಿದ್ದಾರಾ? ಅದರಲ್ಲಿ ಕೇವಲ 31 ಸಾವಿರ ಕೋಟಿ ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಗಿದೆ
ಬೆಂಗಳೂರು (ಮಾ. 8): ಈ ಸರ್ಕಾರ ಅನೈತಿಕವಾಗಿ ರಚನೆಯಾಗಿದೆ. ಇದೇ ಹಿನ್ನಲೆ ಅನೈತಿಕ ಸರ್ಕಾರದ ಬಜೆಟ್ ಕೇಳಬಾರದು ಎಂದು ನಾವು ಸಭಾತ್ಯಾಗ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ರಾಜ್ಯ ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಲ್ಲ. ಯಾವುದೇ ಗೊತ್ತುಗುರಿ ಇಲ್ಲದ ಟೊಳ್ಳು ಬಜೆಟ್ ಇದಾಗಿದೆ. ಯಾವ ಇಲಾಖೆಗೆ ಎಷ್ಟು ಖರ್ಚು ಎಂದು ಹೇಳಿಲ್ಲ. ಬಿಚ್ಚಿಡುವುದಕ್ಕಿಂತ ಮುಚ್ಚಿಡುವ ಕೆಲಸ ಆಗಿದೆ. ಈ ಬಜೆಟ್ನಲ್ಲಿ ಪಾರದರ್ಶಕತೆ ಇಲ್ಲ. ಒಟ್ಟು ಬಜೆಟ್ನ ಶೇ.26ರಷ್ಟು ಸಾಲವಾಗಿದ್ದು, ಆರ್ಥಿಕ ದಿವಾಳಿಯಾಗಿರುವುದಕ್ಕೆ ಇದೇ ಸಾಕ್ಷಿ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಜೆಟ್ನಲ್ಲಿ ಹಿಂದಿನ ಖರ್ಚು, ಮುಂದಿನದರ ಬಗ್ಗೆ ತಿಳಿಸಬೇಕು. ಪ್ರತಿ ಇಲಾಖೆಯ ಖರ್ಚು,ವೆಚ್ಚ ವಿವರಿಸಬೇಕು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡಲಾಗಿದೆ. ಈ ವರ್ಷ ಏನು ಖರ್ಚು ಮಾಡುತ್ತಿದ್ದಾರೆ. ಇದರ ಬಗ್ಗೆ ವಿವರಿಸಬೇಕು. ಆದರೆ, ಬಜೆಟ್ ನಲ್ಲಿ ಏನೂ ವಿವರಿಸಿಲ್ಲ. ಬಿಚ್ಚಿಡುವುದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದು ರಾಜ್ಯ ಸರ್ಕಾರದ ಬಜೆಟ್ ಗೆ ಅಸಮಾಧಾನ ವ್ಯಕ್ತಪಡಿಸಿದರು.