ಕಣ್ಣಾಮುಚ್ಚಾಲೆ, ಬೋಗಸ್ ಬಜೆಟ್: ಡಿಕೆಶಿ ವಾಗ್ದಾಳಿ

ಮುಖ್ಯಮಂತ್ರಿ ಬಿ‌.ಎಸ್ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿಎಚ್.ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ ಎಂದು ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿಎಸ್ಟಿ ಸಾಲದ ಮೊರೆ ಅನಿವಾರ್ಯವಾಗಿದೆ ಎಂಬುದನ್ನು ಸಿ.ಎಂ ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ ಎಂದಿದ್ದಾರೆ.

ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ 70 ಸಾವಿರ ಕೋಟಿ ರೂ. ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ “ಸಾಲ ಮಾಡಿ ತುಪ್ಪ ತಿನ್ನು” ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ ಈ ಸರಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ ಎನ್ನುವಂತಿದೆ ಎಂದಿದ್ದಾರೆ

ರಾಜ್ಯಗಳ ಜಿಎಸ್ಟಿ ಪಾಲು ಹಂಚುವಾಗ ಗುಜರಾತ್, ಅಸ್ಸಾಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರಕಾರವಾಗಲಿ, ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್ ಡೌನ್ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಘೋಷಣೆಗಳ ಮೇಲೆ ಘೋಷಣೆಗಳನ್ನು ಸಿಎಂ ಪ್ರಕಟಿಸಿದ್ದಾರೆ.

ಆದರೆ ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಎಲ್ಲಿಂದ‌ ದುಡ್ಡು ತರುತ್ತಾರೆ ಎಂಬುದನ್ನೇ ಹೇಳಿಲ್ಲ. ಹೀಗಾಗಿ ಈ ಘೋಷಣೆಗಳೆಲ್ಲ ಘೋಷಣೆಯಾಗಿಯೇ ಉಳಿದುಕೊಳ್ಳುವ ಅಪಾಯವಿದೆ. ಪ್ರತಿ ಬಾರಿ ಬಜೆಟ್ ಅನ್ನು ಮಂಡಿಸುವಾಗ ಇಲಾಖೆವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಆಗ ಯಾವ ಇಲಾಖೆಗೆ ಏನು, ಎಷ್ಟು ಎಂಬುದು ತಿಳಿಯುತ್ತದೆ‌ ಎಂದಿದ್ದಾರೆ

ಆದರೆ ಈಗ ಸರ್ಕಾರ ವಲಯವಾರು ಘೋಷಣೆ ಮಾಡಿ “ಗುಂಪಲ್ಲಿ ಗೋವಿಂದಾ” ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚಿದೆ.ಕೃಷಿಗೆ 31,028 ಕೋಟಿ ಘೋಷಿಸಿ, ಇದು ರೈತರಿಗೆ ಬಂಪರ್ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ.‌ ಅದಕ್ಕೆ‌ ಪೂರಕವಾಗಿರುವ ನೀರಾವರಿ ಯೋಜನೆಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ ಹೀಗೆ ಎಲ್ಲವನ್ನೂ ಒಳಗೊಂಡಿದೆ ಎಂದರು

ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 61 ಸಾವಿರ ಕೋಟಿ ರುಪಾಯಿ ಎಂದು ಬಿಂಬಿಸುತ್ತಿರುವ ಸರ್ಕಾರ, ಇದರಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ವಸತಿ, ಕಾರ್ಮಿಕ, ಮಾನವ ಸಂಪನ್ಮೂಲ, ಗ್ರಾಮೀಣಭಿವೃದ್ಧಿ ಇಲಾಖೆಯನ್ನೂ ಸೇರಿಸಿದೆ.

ಇನ್ನು ಒಂದು ರೂಪಾಯಿ ಹೊರೆ ಹಾಕದ ಬಜೆಟ್ ಎಂದು ಸಿಎಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಸರಕಾರ ಪೆಟ್ರೋಲ್ ಮೇಲೆ 33 ರೂ., ಡೀಸೆಲ್ ಮೇಲೆ 20 ರೂ. ಸುಂಕ ವಸೂಲಿ ಮಾಡುತ್ತಿದೆ.

ಬಜೆಟ್ ಮುನ್ನವೇ ಆಸ್ತಿ ತೆರಿಗೆ ಹೆಚ್ಚಿಸಿದೆ. ವಿದ್ಯುತ್, ನೀರಿನ ದರ ಏರಿಕೆ ಮಾಡಿದೆ. ಈಗಾಗಲೇ ಸುಲಿಗೆ ಮಾಡಲು ಆರಂಭಿಸಿರುವ ಬಿಜೆಪಿ ಈಗ ತಾನು ಜನರ ಮೇಲೆ ಹೊರೆ ಹಾಕಿಲ್ಲ ಎಂದು ಸುಳ್ಳು ಹೇಳುತ್ತಿದೆ.
ಹೀಗೆ ರಾಜ್ಯ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಬಜೆಟ್ ನಲ್ಲಿ ಸುಳ್ಳಿನ ಹೊಳೆ ಹರಿಸಿದೆ ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *