ಮುಂದುವರೆದ ಕಲ್ಯಾಣ ಕರ್ನಾಟಕ ಕಡೆಗಣನೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಲೇ ಹೇಳಿದರಾದರೂ ನಂತರದಲ್ಲಿ ವಿಶೇಷ ಅನುದಾನವನ್ನೇನೂ ಘೋಷಿಸದೇ ನಿರಾಸೆಗೊಳಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿರವರು ತಿಳಿಸಿದ್ದಾರೆ.
ಆರಂಭದಲ್ಲಿ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯತಂತ್ರದ ನೋಟ ವಿವರಿಸುವಾಗ ಅವರು ರಾಜ್ಯದ ಬೇರಾವುದೇ ಭಾಗದ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಕಲ್ಯಾಣ ಕರ್ನಾಟಕದ ಹೆಸರನ್ನು ಮಾತ್ರ ಹೇಳಿದರು. ಆಗ ವಿಶೇಷ ಅನುದಾನ ಸಿಗಬಹುದೆಂಬ ಆಸೆ ಚಿಗುರೊಡೆಯಿತು. ಆದರೆ ಕೆಲ ಹೊತ್ತಲ್ಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಯಥಾಪ್ರಕಾರ ಹಿಂದಿನ ವರ್ಷಗಳಂತೆ ೧೫೦೦ ಕೋಟಿ ರೂ.ಗಳನ್ನಷ್ಟೇ ಅನುದಾನ ಘೋಷಿಸಿದರು. ಬೇರಾವುದೇ ಹೊಸ ಯೋಜನೆ, ಕೊಡುಗೆ ಪ್ರಕಟಿಸಲಿಲ್ಲ.
ಕೆಕೆಆರ್‌ಡಿಬಿಗೆ ೨ ಸಾವಿರ ಕೋಟಿ ರೂ. ಕೊಡಬೇಕಾಗಿತ್ತು.
ಕಲಬುರಗಿ ಜಿಲ್ಲೆಗೆ ಏನನ್ನೂ ಕೊಟ್ಟಿಲ್ಲ.
ಮುಖ್ಯಮಂತ್ರಿಗಳು ತಾವೇ ಮರುನಾಮಕರಣ ಮಾಡಿದಂಥ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿ ನಿರೀಕ್ಷೆ ಹುಸಿಗೊಳಿಸಿದ್ದಾರೆ.
ಈ ಹಿಂದೆ ಹೈದರಾಬಾದ್ ಕರ್ನಾಟಕಕ್ಕೆ `ಕಲ್ಯಾಣ ಕರ್ನಾಟಕ’ವೆಂದು ಮರುನಾಮಕರಣ ಮಾಡಿದ ಕೆಲದಿನಗಳ ನಂತರ ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ವೇಗ ವೃದ್ಧಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ತಾವೇ ಮಂಡಿಸಿದ ಎರಡು ಬಜೆಟ್‌ನಲ್ಲೂ ಸಚಿವಾಲಯ ಸ್ಥಾಪನೆಯನ್ನು ಪ್ರಸ್ತಾಪಿಸಲಿಲ್ಲ.
ಕೆಕೆಆರ್‌ಡಿಬಿ ಅನುದಾನವನ್ನು ೨೫೦೦ ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಆ ಭಾಗದ ವಿರೋಧ ಪಕ್ಷಗಳು, ವಾಣಿಜ್ಯೋದ್ಯಮ ಸಂಸ್ಥೆ, ಜನಪರ ಸಂಘಟನೆಗಳು, ತಜ್ಞರು ಆಗ್ರಹಿಸಿದ್ದರು. ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಖಾಲಿಯಿರುವ ೬೭ ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬ ಬೇಡಿಕೆ ಸಹ ಪ್ರಬಲವಾಗಿತ್ತು. ಆದರೆ ಯಾವುದಕ್ಕೂ ಮುಖ್ಯಮಂತ್ರಿಗಳಿಂದ ಸ್ಪಂದನೆ ಸಿಗಲೇಯಿಲ್ಲ.
ಕುಂಟುತ್ತ ಸಾಗಿರುವ ನೀರಾವರಿ ಯೋಜನೆಗಳಿಗೂ ಏನೂ ಸಿಕ್ಕಿಲ್ಲ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ೩೭೧ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನದ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ.
ಇದು ಸಂಪೂರ್ಣ ನಿರಾಶಾದಯಕ ಬಜೆಟ್ ಆಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕಾಗಿತ್ತು. ಇದರಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತಿತ್ತು. ಯಡಿಯೂರಪ್ಪ ನುಡಿದಂತೆ ನಡೆದುಕೊಳ್ಳದೇ ಮೋಸ ಮಾಡಿದ್ದಾರೆ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಜನರನ್ನು ನಿರಾಸೆಗೊಳಿಸಿದೆ.
ಒಟ್ಟಿನಲ್ಲಿ ಈ ಬಜೆಟ್ ಕಲ್ಯಾಣ ಕರ್ನಾಟಕದ ವಿರೋಧಿ ಮತ್ತು ನಿರಾಶದಾಯಕ ಬಜೆಟಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ಮೇಲಾಗಿ ಕಲಬುರಗಿ ಜಿಲ್ಲೆಗೆ ಸಂಪೂರ್ಣವಾಗಿ ಕಡೆಗಣಿಸಿದಂತಹ ಬಜೆಟಾಗಿದೆ ಎಂದು ತಿಳಿಸಿದ್ದಾರೆ.