ಮುಖ್ಯಮಂತ್ರಿಗಳಿಂದ ಅಭಿವೃದ್ಧಿಪರ ಬಜೆಟ್: ನಮೋಶಿ
ಭಾರತ ಆತ್ಮನಿರ್ಭರ್ ದೃಷ್ಟಿಕೋನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ವಲಯಗಳಿಗೆ ಆದ್ಯತೆಯ ಮೇರೆಗೆ ಬಜೆಟ್ ಹಂಚಿಕೆಯ ಮೂಲಕ ಅಭಿವೃದ್ಧಿಪರ ಆಯವ್ಯಯ ಮಂಡಿಸಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ ಶಶಿಲ್ ಜಿ. ನಮೋಶಿ ಅವರು ಶ್ಲಾಘಿಸಿದ್ದಾರೆ.
ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಅನುಷ್ಠಾನವನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಥಮಿ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ, ವಿಶ್ವವಿದ್ಯಾಲಯದ ಎಲ್ಲ ಆಯಾಮಗಳಿಗೆ ಬಜೆಟ್‍ನಲ್ಲಿ ಅನುದಾನ ಘೋಷಿಸಿರುವುದು ಶಿಕ್ಷಣ ಹಾಗೂ ಶಿಕ್ಷಕರ ಪ್ರೇಮಿ ಸರ್ಕಾರ ಎಂಬುದನ್ನು ಖಚಿತಗೊಳಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
50 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ 100 ಕೋಟಿ ರೂ.ಗಳ ಅನುದಾನ ಕೊಟ್ಟಿರುವುದನ್ನು ನಿದರ್ಶನ ನೀಡಿರುವ ನಮೋಶಿ ಅವರು, ಎರಡು ವರ್ಷಗಳಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಶಾಲಾ ಶೌಚಾಲಯಗಳ ಉನ್ನತೀಕರಣ ಮತ್ತು ನೀರಿನ ಸೌಲಭ್ಯ ಒದಗಿಸಲು ಕ್ರಮ. ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳಿಗಾಗಿ 150 ಕೋಟಿ ರೂ.ಗಳು ಹಾಗೂ ಪೀಠೋಪಕರಣ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಲು 50 ಕೋಟಿ ರೂ.ಗಳು, ಕೇಂದ್ರ ಹಾಗೂ ರಾಜ್ಯ ಆಡಳಿತ ಸೇವೆಗಳು ಬ್ಯಾಂಕಿಂಗ್, ರೈಲ್ವೆ ಇತ್ಯಾದಿ ಉದ್ಯೋಗಗಳಲ್ಲಿ ಕನ್ನಡಿಗರ ಸೇರ್ಪಡೆಯ ಉತ್ತೇಜನಕ್ಕೆ ಸಾಮಥ್ರ್ಯ- ಸಾರಥ್ಯ ಕಾರ್ಯಕ್ರಮ. ಐದು ಲಕ್ಷ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಐದು ಕೋಟಿ ರೂ.ಗಳು, ಜಾಗತಿಕ ಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶೈಕ್ಷಣಿಕ ನಾಯಕತ್ವ ಕಾರ್ಯಕ್ರಮ. ರಾಜ್ಯದ ಆಯ್ದ ಮಹಾನಗರ ಪಾಲಿಕೆ, ನಗರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂಭ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಪ್ರತಿ ವಿಭಾಗದಲ್ಲಿ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕ್ರೀಡಾ ಶಾಲೆಯೆಂದು ಉನ್ನತೀಕರಿಸುವುದು. ಟಾಟಾ ಟೆಕ್ನಾಲಾಜಿ ಲಿಮಿಟೆಡ್ ಸಹಯೋಗದೊಂದಿಗೆ 4636 ಕೋಟಿ ರೂ.ಗಳ ಹೂಡಿಕೆಯೊಂದಿಗೆ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಕ್ಕಾಗಿ ಕ್ರಮಗಳು ಸೇರಿವೆ ಎಂದು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 1500 ಕೋಟಿ ರೂ.ಗಳನ್ನು, ಕೊಪ್ಪಳ್ ಜಿಲ್ಲೆಯ ಸಿರಿವಾರ್ ಹಳ್ಳಿಯಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಪ್ರಾರಂಭ. ಬಳ್ಳಾರಿಯ ಆಲದ ಹಳ್ಳಿಯಲ್ಲಿ ಅತ್ಯಾಧುನಿಕ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ. ಕೊಪ್ಪಳ್ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ, ಕಲಬುರ್ಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟ ಗಾಯಗಳ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾರಂಭ, ಯಾದಗಿರಿ ಜಿಲ್ಲೆಯ ಕಡೇಚೂರನಲ್ಲಿ 1478 ಕೋಟಿ ರೂ.ಗಳ ವೆಚ್ಚದಲ್ಲಿ ಬಲ್ಕ್ ಡ್ರಗ್ ಪಾರ್ಕ್ ಸ್ಥಾಪನೆ ಮತ್ತು ಬೀದರ್‍ನ ಕೃಷಿ ಉಪಕರಣಗಳ ತಯಾರಿಕೆ ಕ್ಲಸ್ಟರ್‍ನಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ, ಕಲಬುರ್ಗಿಯ ಫಿರೋಜಾಬಾದ್‍ನಲ್ಲಿ 500 ಮೆಗಾವ್ಯಾಟ್ ಸಾಮಥ್ರ್ಯದ ಸೌರಶಕ್ತಿ ಪಾರ್ಕ್ ಸ್ಥಾಪನೆ, ಬಸವಕಲ್ಯಾಣದಲ್ಲಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ 200 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಾಮಗಾರಿ ಶೀಘ್ರ ಪ್ರಾರಂಭ, ಬಳ್ಳಾರಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಪ್ರಾರಂಭ ಮುಂತಾದವು ಬಜೆಟ್‍ನಲ್ಲಿ ಸೇರಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಹೊಸ ಆಯಾಮದತ್ತ ಮುನ್ನಡೆಯಲು ಅನುಕೂಲ ಆಗುವಂತಹ ಬಜೆಟ್‍ನ್ನು ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಸರ್ಕಾರಕ್ಕೆ ಅಭಿನಂದಿಸುವುದಾಗಿ ನಮೋಶಿ ಅವರು ತಿಳಿಸಿದ್ದಾರೆ.