ಇಂದು ವಿಶ್ವ ಕಿಡ್ನಿ ದಿನ: ರಾಜ್ಯದಲ್ಲಿ ನೂರರಲ್ಲಿ 7 ಮಂದಿಗೆ ಕಿಡ್ನಿ ಸಮಸ್ಯೆ!

ಭಾರತದಲ್ಲಿ ಪ್ರತಿ 10ರಲ್ಲಿ ಒಬ್ಬರು ಹಾಗೂ ರಾಜ್ಯದಲ್ಲಿ 100ರಲ್ಲಿ 7 ಜನ ಕಿಡ್ನಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ನಾನಾ ಸಂಶೋಧನೆಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಕೈಗಾರಿಕಾ ತ್ಯಾಜ್ಯ ನೀರನ್ನು ಬಳಸಿ ಬೆಳೆಯುವ ತರಕಾರಿಗಳನ್ನು ಸೇವನೆ ಮಾಡಿರುವ ಮಕ್ಕಳಲ್ಲಿ ಕಿಡ್ನಿ ವೈಫಲ್ಯ ಪ್ರಮಾಣ ಹೆಚ್ಚುತ್ತಿದೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳ ತ್ಯಾಜ್ಯಗಳಲ್ಲಿನ ಅಗಾಧ ಪ್ರಮಾಣದ ಲೋಹ ಮನುಷ್ಯನ ದೇಹ ಸೇರುತ್ತಿದ್ದು ರಾಜ್ಯಕ್ಕೆ ಕಿಡ್ನಿ ವೈಫಲ್ಯ ಗಂಡಾಂತರಕ್ಕೆ ಮುನ್ಸೂಚನೆಯಾಗಿದೆ ಎಂದು ಸಂಶೋಧನಾ ವರದಿ ತಿಳಿಸಿದೆ. ಪ್ರಮುಖ ನಗರಗಳ 193 ಕೆರೆಗಳ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿರುವ ಭಾರತೀಯ ವಿಜ್ಞಾನ ಸಂಸ್ಥೆ ಕೈಗಾರಿಕಾ ತ್ಯಾಜ್ಯ ನೀರು ಸೇರುವ ಕೆರೆಗಳಲ್ಲಿ ಲೋಹದ ಅಂಶಗಳಿರುವುದನ್ನು ದೃಢೀಕರಿಸಿದೆ. ಬೆಂಗಳೂರಿನ ವರ್ತೂರು, ಜಕ್ಕೂರು ಕೆರೆಗಳ ಸಮೀಪ ಬೆಳೆಯಲಾದ ಪುದೀನ, ಮೆಕ್ಕೆಜೋಳ, ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಕ್ಯಾರೆಟ್‌ ಮಾತ್ರವಲ್ಲದೆ ಇಲ್ಲಿನ ಹಸುಗಳ ಹಾಲು, ಮೀನಿನಲ್ಲಿಸೀಸ, ಕ್ಯಾಡ್ಮಿಯಂ, ಕ್ರೋಮಿಯಂ, ನಿಕ್ಕಲ್‌, ಝಿಂಕ್‌, ಆರ್ಸೇನಿಕ್‌ ಮತ್ತಿತರ ಲೋಹದ ಅಂಶಗಳನ್ನು ಪತ್ತೆ ಹಚ್ಚಲಾಗಿರುವ ಆತಂಕಕಾರಿ ವಿಚಾರ ಬಹಿರಂಗಗೊಂಡಿದ್ದು, ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

5 ಸಾವಿರದಲ್ಲೊಬ್ಬರಿಗೆ ಕಿಡ್ನಿ ವೈಫಲ್ಯ
ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುವವರು ಕಿಡ್ನಿ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಭಾರತ ಮಧುಮೇಹದ ರಾಜಧಾನಿ ಎಂಬ ಅಪಕೀರ್ತಿಗೆ ಪಾತ್ರವಾಗಿದ್ದು, ಕಿಡ್ನಿ ಸಮಸ್ಯೆಯೂ ಹೆಚ್ಚುತ್ತಲೇ ಇದೆ. 12 ವರ್ಷಗಳ ಹಿಂದಿನ ಸಮೀಕ್ಷಾ ವರದಿಯ ಪ್ರಕಾರ ಪ್ರತಿ 1 ಲಕ್ಷದಲ್ಲೊಬ್ಬರಿಗೆ ಕಿಡ್ನಿ ವೈಫಲ್ಯವಾಗುತ್ತಿತ್ತು. ಈಗ ಪ್ರತಿ 5 ಸಾವಿರದಲ್ಲೊಬ್ಬರಿಗೆ ಕಿಡ್ನಿ ವೈಫಲ್ಯವಾಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.

ದೇಶದಲ್ಲಿ ಲಕ್ಷಾಂತರ ಮಂದಿ ಕಿಡ್ನಿ ಸಮಸ್ಯೆ ಅನುಭವಿಸುತ್ತಿದ್ದಾರಾದರೂ ಪ್ರತಿ ವರ್ಷ 6-7 ಸಾವಿರ ಮಂದಿ ಮಾತ್ರ ಕಿಡ್ನಿ ಕಸಿ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನುಳಿದವರೆಲ್ಲಾ ಜೀವನಪೂರ್ತಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಆಹಾರದ ಗುಣಮಟ್ಟದ ಮೇಲೆ ಮಾರಕ ಲೋಹದ ಅಂಶಗಳು ತೀವ್ರ ಸ್ವರೂಪದಲ್ಲಿ ಪರಿಣಾಮ ಬೀರುತ್ತಿವೆ. ನೀರಿನ ಮೂಲಗಳು, ಅಂತರ್ಜಲಕ್ಕೆ ಇಂತಹ ಲೋಹಗಳ ಸೇರ್ಪಡೆ ತಡೆಗಟ್ಟದೇ ಹೋದರೆ ಮುಂದೊಂದು ದಿನ ಕಿಡ್ನಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳು, ಕ್ಯಾನ್ಸರ್‌ ಮಿತಿ ಮೀರುವುದರಲ್ಲಿ ಸಂದೇಹವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ದಾನದಲ್ಲಿ ಮಹಿಳೆಯರೇ ಹೆಚ್ಚು
ಕಿಡ್ನಿ ವೈಫಲ್ಯ ಅನುಭವಿಸೋರಲ್ಲಿ ಪುರುಷರು ಹೆಚ್ಚಾದರೆ, ದಾನಿಗಳಲ್ಲಿಶೇ. ಶೇ. 90ರಷ್ಟು ಮಹಿಳೆಯರು ಎನ್ನುವುದು ವಿಶೇಷ. ತಾಯಿ, ಪತ್ನಿ, ಸಹೋದರಿ ಹೀಗೆ ಮಹಿಳೆಯರು ಪುರುಷರಿಗೆ ಕಿಡ್ನಿ ದಾನ ಮಾಡುತ್ತಾರೆ. ಪುರುಷರು ಕುಟುಂಬ ನಿರ್ವಹಣೆ, ದುಡಿಮೆ ಮೊದಲಾದ ನೆಪ ಒಡ್ಡಿ ಕಿಡ್ನಿ ದಾನದಿಂದ ದೂರ ಉಳಿಯುತ್ತಾರೆ. ಕಿಡ್ನಿ ಕಸಿಯಲ್ಲಿಯೂ ಲೈವ್‌ ಟ್ರಾನ್ಸ್‌ಪ್ಲಾಂಟೇಶನ್‌ (ಬದುಕಿರುವವರು ಕಿಡ್ನಿ ನೀಡುವುದು) ಹೆಚ್ಚು. ವರ್ಷದಲ್ಲಿಸುಮಾರು 1.5 ಲಕ್ಷ ಮಂದಿ ಅಪಘಾತದಲ್ಲಿ ಬ್ರೈನ್‌ ಡೆತ್‌ ಆಗುತ್ತಿದ್ದಾರೆ. ಬ್ರೈನ್‌ಡೆತ್‌ಗೆ ಒಳಗಾದವರ ಅಂಗಾಂಗಳನ್ನು ದಾನ ಮಾಡಿದರೆ ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಬಹುತೇಕರಿಗೆ ಕಿಡ್ನಿ ಕಸಿ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ.

ಎಲ್‌ಕೆಜಿ ಮಗುವಿನ ಕಿಡ್ನಿ ವೈಫಲ್ಯ

ಬೆಂಗಳೂರಿನ ವರ್ತೂರು ಕೆರೆ ಸುತ್ತಮುತ್ತಲಿನ ಮಕ್ಕಳನ್ನು ಸಮೀಕ್ಷೆಯ ಅಂಗವಾಗಿ ಪರೀಕ್ಷೆಗೊಳಪಡಿಸಿದಾಗ ಶಾಲೆಯೊಂದರಲ್ಲಿಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ ಹೆಣ್ಣುಮಗುವೊಂದರಲ್ಲಿ2 ಕಿಡ್ನಿಗಳು ವೈಫಲ್ಯವಾಗಿರುವುದು ಕಂಡುಬಂದಿತ್ತು. ಸಮೀಪದಲ್ಲಿನ ಮತ್ತೊಂದು ಶಾಲೆಯಲ್ಲಿ8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ 1 ಕಿಡ್ನಿ ವೈಫಲ್ಯವಾಗಿತ್ತೆಂದು ಐಐಎಸ್‌ಸಿ ವರದಿಯಲ್ಲಿಉಲ್ಲೇಖಿಸಲಾಗಿದೆ.

ಹೀಗೆ ಮಾಡಿ..
ಆರಂಭಿಕ ಹಂತದಲ್ಲಿ ಕಿಡ್ನಿ ಸಮಸ್ಯೆ ಕುರಿತು ಸೂಚನೆಗಳು ಕಂಡುಬರುವುದಿಲ್ಲ. ಕಿಡ್ನಿಗೆ ಸಂಬಂಧಿಸಿದಂತೆ ವರ್ಷದಲ್ಲೊಮ್ಮೆಯಾದರೂ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮಸ್ಯೆ ಆರಂಭಿಕ ಹಂತದಲ್ಲೇ ತಿಳಿದರೆ ಕಿಡ್ನಿ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಕಿಡ್ನಿ ಸಮಸ್ಯೆ ಹೆಚ್ಚುತ್ತಾ ಹೋದಂತೆ ಕಾಲು ಊತ, ಮೂತ್ರ ಕಡಿಮೆ ಹೋಗುವುದು, ರಕ್ತಹೀನತೆ, ಸುಸ್ತಾಗುವುದು, ಉಸಿರಾಟದ ಸಮಸ್ಯೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿಚಿಕಿತ್ಸೆ ಪಡೆದರೆ ಒಳ್ಳೆಯದು. ಕೊನೆಯ ಹಂತ ತಲುಪಿದರೆ ಕಿಡ್ನಿ ಕಸಿ ಅಥವಾ ಜೀವನ ಪೂರ್ತಿ ಡಯಾಲಿಸಿಸ್ಸೇ ಗತಿ.

ಕೈಗಾರಿಕೋದ್ಯಮಿಗಳು, ರಾಜಕಾರಣಿಗಳ ಇಚ್ಛಾಶಕ್ತಿಯಿದ್ದರೆ ಕೈಗಾರಿಕೆಗಳ ತ್ಯಾಜ್ಯ ಕೆರೆಗಳನ್ನು ಸೇರುವುದನ್ನು ತಪ್ಪಿಸಬಹುದಾಗಿದೆ. ಜತೆಗೆ, ಆಹಾರದ ಗುಣಮಟ್ಟ, ಆರೋಗ್ಯ ಸಂರಕ್ಷಣೆ ಕಾಯ್ದುಕೊಳ್ಳಬೇಕಿದೆ.

– ಡಾ.ಟಿವಿ ರಾಮಚಂದ್ರ | ಹಿರಿಯ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ

ಆರಂಭಿಕ ಹಂತದಲ್ಲೇ ಕಿಡ್ನಿ ಸಮಸ್ಯೆ ಬಗ್ಗೆ ತಿಳಿದು ಚಿಕಿತ್ಸೆ ಪಡೆದರೆ ಒಳ್ಳೆಯದು. ಕಿಡ್ನಿ ವೈಪಲ್ಯದ ಕೊನೆಯ ಹಂತದಲ್ಲಿಕಸಿ ಮತ್ತು ಡಯಾಲಿಸಿಸ್‌ ಮಾತ್ರವೇ ದಾರಿ. ಹಾಗಾಗಿ ಯಾರೂ ಕೂಡ ನಿರ್ಲಕ್ಷ್ಯ ತೋರಬಾರದು.
-ಡಾ.ಗಣೇಶ್‌ ಶ್ರೀನಿವಾಸ್‌ ಪ್ರಸಾದ್‌, ಮೂತ್ರಪಿಂಡ ರೋಗ ತಜ್ಞರು, ಸಿದ್ಧಗಂಗಾ ಆಸ್ಪತ್ರೆ, ತುಮಕೂರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *