ಯುವತಿಯ ಮೂಗಿಗೆ ಪಂಚ್​​ ಕೊಟ್ಟ Zomato ಡೆಲಿವರಿ ಬಾಯ್​..!ತೀವ್ರವಾಗಿ ಗಾಯಗೊಂಡ ಯುವತಿ ಹೇಳಿದ್ದೇನು?

ಆನ್​​ಲೈನ್​ನಲ್ಲಿ ಊಟ ಆರ್ಡರ್​ ಮಾಡೋ ಪ್ರತಿಯೊಬ್ಬರು ನೋಡಲೇ ಬೇಕಾದ ಸುದ್ದಿ.. ಜೊಮ್ಯಾಟೋ ಮೂಲಕ ಮಧ್ಯಾಹ್ನಕ್ಕೆ ಬಿಸಿಬಿಸಿ ಊಟ ತರಿಸಿಕೊಳ್ಳೋಣ ಅಂತ ಯುವತಿ ಫುಡ್​ ಆರ್ಡರ್​ ಮಾಡಿದ್ದಾಳೆ. ಆದ್ರೆ ಸರಿಯಾದ ಸಮಯಕ್ಕೆ ಊಟ ಬಂದಿಲ್ಲ. ಯಾಕೆ ತಡವಾಗಿ ಬಂದ್ರಿ, ಸ್ವಲ್ಪ ಹೊತ್ತು ಇರಿ ನಾನು ನಿಮ್ಮ Zomato ಟೀಮ್​ ಜೊತೆ ಮಾತನಾಡುತ್ತೇನೆ ಅಂತ ಯುವತಿ ಹೇಳಿದಕ್ಕೆ, ಡೆಲಿವರಿ ಬಾಯ್​ ಆಕೆಯ ಮೇಲೆ ಹಲ್ಲೆ ಮಾಡಿ​ ಪರಾರಿ ಆಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​​​​ ಸಿಟಿ ಠಾಣಾ ವ್ಯಪ್ತಿಯಲ್ಲಿ  ನಡೆದಿದೆ.

 

ಹಿತೇಶಾ ಚಂದ್ರಾಣಿ ಅನ್ನೋ ಯುವತಿ ಒಂಟಿಯಾಗಿ ಮನೆಯಲ್ಲಿ ಒಬ್ಬಳೇ ನೆಲೆಸಿದ್ದು, ಮಧ್ಯಾಹ್ನ ಹಸಿವಾದಾಗ 3.30ಗೆ ಜೊಮ್ಯಾಟೋ ಆಪ್​ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್​​ ಮಾಡಿದ್ದಾರೆ. ಆ್ಯಪ್​​​ ಲೆಕ್ಕಾಚಾರದ ಪ್ರಕಾರ 4.30 ಒಳಗಾಗಿ ಊಟ ತಲುಪಬೇಕಿತ್ತು. ಆದ್ರೆ ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗುತ್ತಿರುವ ಕಾರಣ ಆರ್ಡರ್​​ ಕ್ಯಾನ್ಸಲ್​​​ ಮಾಡಬಹುದಾ ಅಂತ ಕೇಳಿದ್ದಾರೆ. ಇದೆಲ್ಲಾ ಆಗುವಾಗ ಡೆಲಿವರಿ ಬಾಯ್​​ ಮನೆಗೆ ಆಗಮಿಸಿದ್ದಾನೆ. ಮೊದಲೇ ತಡವಾಗಿದ್ದ ಕಾರಣ ಅಸಮಾಧಾನಗೊಂಡ ಯುವತಿ, ಜೊಮ್ಯಾಟೋ ಟೀಂ ಜೊತೆ ಮಾತಾಡಿದ್ದೇನೆ. ಈಗ ನನಗೆ ಯಾವುದೇ ಖರ್ಚಿಲ್ಲದೇ ಊಟ ಕೊಡ್ತೀರ.? ನಿಮ್ಮ ಕಡೆಯವರಿಂದ ಉತ್ತರ ಬರುವ ತನಕ ಕಾದು ನಿಲ್ಲಲು ಸೂಚಿಸಿದ್ದಾರೆ. ಆದರೆ ಯುವತಿ ಹೇಳುವ ಪ್ರಕಾರ ಮೊದಲೇ ಸಿಡಿಮಿಡಿ ಎನ್ನುತ್ತಿದ್ದ ಡೆಲಿವರಿ ಬಾಯ್​​​​, ಕಾಯಲು ಹೇಳಿದಾಕ್ಷಣ ಬಾಯಿಗೆ ಬಂದಂತೆ ಮಾತನಾಡಿ ನಾನೇನು ನಿಮ್ಮ ಆಳಾ.? ಎಂದು ಕೂಗಾಡಿದ್ದಾನೆ. ಭಯಗೊಂಡ ಯುವತಿ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಜೋರಾಗಿ ಬಾಗಿಲು ತಳ್ಳಿದಾತ ಸೀದಾ ಒಳನುಗ್ಗಿ ಟೇಬಲ್ಲಿನ ಮೇಲಿಟ್ಟಿದ ಪೊಟ್ಟಣವನ್ನು ಕಿತ್ತುಕೊಂಡಿದಲ್ಲದೇ, ಮುಷ್ಠಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದ್ದಾನೆ..

ಡೆಲಿವರಿ ಬಾಯ್​ನಿಂದ ಹಲ್ಲೆಗೊಳಗಾದ ಯುವತಿಯ ಮೂಗಿನಿಂದ ರಕ್ತ ಸುರಿಯಲಾರಂಭಿಸಿದ್ದು, ಕಂಗಾಲಾಗಿ ಘಟನೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. ನಂತ್ರ ಆಸ್ಪತ್ರೆಗೆ ತೆರಳಿದ ಯುವತಿ ಚಿಕಿತ್ಸೆ ಪಡೆದಿದ್ದಾರೆ. ಯುವತಿ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಲ್ಲದೆ ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *