ಮುಖ್ಯಮಂತ್ರಿಗಳು ಹಣಕಾಸು ಖಾತೆಯನ್ನು ಬಿಟ್ಟುಕೊಡಬೇಕು, ಆ ಖಾತೆಗೆ ಉತ್ತಮ ಜ್ಞಾನ ಹೊಂದಿದವರು ಬೇಕು: ಎ ಎಚ್ ವಿಶ್ವನಾಥ್
ಬೆಂಗಳೂರು: ಮುಖ್ಯಮಂತ್ರಿಗಳು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ಹೊಂದಿರುವ ಮುಖ್ಯಮಂತ್ರಿಗಳ ಕ್ರಮವನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಎಚ್ ವಿಶ್ವನಾಥ್ ಟೀಕಿಸಿದ್ದಾರೆ.
ನಿನ್ನೆ ವಿಧಾನಪರಿಷತ್ ನಲ್ಲಿ ಚರ್ಚೆಯ ವೇಳೆ, ಹಣಕಾಸು ಖಾತೆಗೆ ಹೊರಗಿನ ಸಚಿವರುಗಳು ಬೇಕು.ಸಿಎಂ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಹಲವು ಬಜೆಟ್ ಗಳನ್ನು ಮಂಡಿಸಿದ್ದಾರೆ. ಅವರು ಹಣಕಾಸು ತಜ್ಞರಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು. ಅವರು ಮಂಡಿಸಿರುವ ಬಜೆಟ್ ನಲ್ಲಿ ಆಳವಾದ ಸಮಗ್ರತೆಯಿಲ್ಲ. ಹಣಕಾಸು ಖಾತೆಗೆ ಹೊರಗಿನ ಅನುಭವ, ಜ್ಞಾನ ಇರುವ ಸಚಿವರುಗಳು ಬೇಕು. ಅವರು ಹಣಕಾಸಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ತಪಾಸಣೆ ಮಾಡುತ್ತಿರಬೇಕು. ಹಾಗಾದರೆ ಮಾತ್ರ ಹಣಕಾಸಿನ ಶಿಸ್ತು ಬರುತ್ತದೆ ಎಂದರು.
ಇದೇ ವಿಷಯಕ್ಕೆ ತಮ್ಮ ಮತ್ತು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ಜಗಳವೇರ್ಪಟ್ಟಿತ್ತು. ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರು ಬೇಕು ಎಂದು ನಾನು ಹೇಳಿದ್ದೆ. ಅದಕ್ಕವರು ನಿಮಗೆ ನನ್ನ ಸಾಮರ್ಥ್ಯದ ಮೇಲೆ ಅಪನಂಬಿಕೆಯಿದೆಯೇ ಎಂದು ಕೇಳಿದ್ದರು. ಅದು ಸಾಮರ್ಥ್ಯದ ಪ್ರಶ್ನೆ ಅಲ್ಲ, ಸಮಯದ ಅಡತಡೆಯಿಂದ ಸಿಎಂಗಳು ಬೇರೆ ಕೆಲಸಗಳಲ್ಲಿ ಒತ್ತಡ, ಬ್ಯುಸಿಯಲ್ಲಿರುವುದರಿಂದ ಹಣಕಾಸು ಖಾತೆಗೆ ಸಮಯ ಹೊಂದಿಸಲು ಸರಿಯಾಗಿ ಆಗುವುದಿಲ್ಲ ಎಂದು ನಾನು ಹೇಳಿದ್ದೆ ಎಂದರು.
ಈ ಮಧ್ಯೆ ವಿಧಾನಸೌಧ ಬ್ರೋಕರ್ ಗಳಿಗೆ ಸ್ವರ್ಗದಂತಾಗಿದೆ. ಅದು ಅವರಿಗೆ ಮಾಲ್ ಇದ್ದಂತೆ. ಬರುತ್ತಾರೆ, ಸಚಿವರುಗಳು, ಶಾಸಕರುಗಳನ್ನು ಭೇಟಿ ಮಾಡುತ್ತಾರೆ, ಅವರಿಗೇನು ಬೇಕೋ ಅದನ್ನು ಪಡೆದುಕೊಂಡು ಹೋಗುತ್ತಾರೆ. ವಿಧಾನಸೌಧದಿಂದ ಹೊರಹೋಗುವ ಗೇಟ್ ಗಳನ್ನು ಮಧ್ಯಾಹ್ನ ನಂತರ ಬಂದ್ ಮಾಡಬೇಕು. ತಾವು ಸೌಧಕ್ಕೆ ಏಕೆ ಬಂದಿರಿ ಎಂದು ಪ್ರಶ್ನೆ ಮಾಡಬೇಕು ಎಂದು ವಿಶ್ವನಾಥ್ ಹೇಳುತ್ತಾರೆ.