ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಆತಂಕ: ಬಳ್ಳಾರಿಗೂ ಕಾಲಿಟ್ಟ ಆಫ್ರಿಕಾ ವೈರಸ್, ದುಬೈನಿಂದ ಬಂದಿದ್ದ ಅಣ್ಣ-ತಂಗಿಯಲ್ಲಿ ಸೋಂಕು ಪತ್ತೆ
ಬಳ್ಳಾರಿ: ವಿಶ್ವದ ವಿವಿಧೆಡೆ ಆತಂಕ ಸೃಷ್ಟಿಸಿರುವ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ಭೀತಿ ಇದೀಗ ಬಳ್ಳಾರಿಗೂ ಎದುರಾಗಿದೆ. ದುಬೈನಿಂದ 2 ವಾರಗಳ ಹಿಂದಷ್ಟೇ ವಾಪಸ್ಸಾಗಿದ್ದ ಅಣ್ಣ-ತಂಗಿಯಲ್ಲಿ ಆಫ್ರಿಕಾ ಮಾದರಿ ವೈರಸ್ ಸೋಂಕು ದೃಢಪಟ್ಟಿದೆ.
ವಿಶಾಲನಗರದಲ್ಲಿ ನೆಲೆಸಿರುವ ಈ ಇಬ್ಬರೂ ತಮ್ಮ ಸಂಬಂಧಿಕರನ್ನು ಭೇಟಿಯಾಗಲೆಂದು ಕಳೆದ ತಿಂಗಳು ದುಬೈಗೆ ತೆರಳಿದ್ದರೆಂದು ತಿಳಿದುಬಂದಿದೆ.
ಬಳಿಕ ಫೆ.17 ರಂದು ಬಳ್ಳಾರಿಗೆ ವಾಪಸ್ಸಾಗಿದ್ದರು. ದುಬೈನಿಂದ ವಾಪಾಸಾದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆದಿತ್ತಾದರೂ ಅದರ ವರದಿ ನೆಗೆಟಿವ್ ಬಂದಿತ್ತು. ಆದರೆ, 2 ದಿನಗಳ ಬಳಿಕ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಕೊರೋನಾ ದೃಢಪಟ್ಟಿತ್ತು.
ಸೋಂಕಿತರು ದುಬೈನಿಂದ ವಾಪಸಾಗಿದ್ದ ಹಿನ್ನೆಲೆಯಲ್ಲಿ ವೈರಸ್’ನ ರೂಪಾಂತರದ ಬಗ್ಗೆ ತಿಳಿದುಕೊಳ್ಳಲು ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಈ ವೇಳೆ ಇವರಲ್ಲಿ ಪತ್ತೆಯಾಗಿರುವುದು ಆಫ್ರಿಕನ್ ರೂಪಾಂತರಿ ವೈರಸ್ ಎನ್ನುವುದು ದೃಢಪಟ್ಟಿದೆ. ಸದ್ಯ ಇಬ್ಬರನ್ನೂ ಮನೆಯಲ್ಲಿಯೇ ಕ್ವಾರಂಟೈನ್ ಗೊಳಪಡಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಮಂದಿಯಲ್ಲಿ ಸೋಂಕು ಕಂಡು ಬಂದಿಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ದುಬೈನಿಂದ ವಾಪಸಾಗಿದ್ದ ಶಿವಮೊಗ್ಗದ ವ್ಯಕ್ತಿಯೊಬ್ಬರಲ್ಲೂ ಆಫ್ರಿಕನ್ ರೂಪಾಂತರಿ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತಾದರೂ ಗುರುವಾರ ನಡೆಸಿದ 2ನೇ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದು ಕೊಂಚ ನೆಮ್ಮದಿ ಮೂಡಿಸಿದೆ.