ತುಕ್ಕು ಹಿಡಿದ 108 ಅಂಬುಲೆನ್ಸ್‍ಗಳು: ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲಿ ಕೆಟ್ಟು ನಿಂತಿರುವ 108 ಅಂಬುಲೆನ್ಸ್‍ಗಳನ್ನು ಕೂಡಲೇ ದುರಸ್ತಿಗೊಳಿಸಿ ಬಳಕೆ ಮಾಡಬೇಕು ಎಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೆಟ್ಟು ನಿಂತ ಅಂಬುಲೆನ್ಸ್‍ಗಳ ಮುಂದೆಯೇ ಶನಿವಾರ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಚೇರಿಯ ಆವರಣದಲ್ಲಿ ಸುಮಾರು ವರ್ಷಗಳಿಂದಲೂ 108 ಅಂಬುಲೆನ್ಸ್‍ಗಳು ಹಾಗೂ ಸರ್ಕಾರಿ ಇತರೇ ವಾಹನಗಳು ನಿಲ್ಲಿಸಿದ್ದು, ಅವೆಲ್ಲ ಕೆಟ್ಟು ತುಕ್ಕು ಹಿಡಿದಿವೆ. ಇದರಿಂದ ಸರ್ಕಾರಕ್ಕೆ ಬಹಳ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂಬುಲೆನ್ಸ್‍ಗಳು ಕೆಟ್ಟು ನಿಂತಿರುವುದರಿಂದ ಸಾರ್ವಜನಿಕರಿಗೂ ಸಹ ಅಂಬುಲೆನ್ಸ್‍ಗಳ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕೂಡಲೇ ಟೆಂಡರ್ ಕರೆದು ಅಂಬುಲೆನ್ಸ್‍ಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಬಳಕೆ ಮಾಡಬೇಕು. ಒಂದು ವೇಳೆ ವಿಳಂಬ ಧೋರಣೆ ಮುಂದುವರೆಸಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಚಿನ್ ಎಸ್. ಫರಹತಾಬಾದ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುರೇಶ್ ಹನಗುಡಿ, ಅಂಬು ಮಸ್ಕಿ, ಅಕ್ಷಯ್, ರಾಹುಲ್ ಫರಹತಾಬಾದ್, ಅರ್ಜುನ್ ಸಿಂಗೆ, ಸುನೀಲ್ ಜಾಧವ್, ಪ್ರವೀಣ್ ಸಜ್ಜನ್, ಲಕ್ಷ್ಮಿಕಾಂತ್, ಉದಯಕುಮಾರ್, ರಾಹುಲ್ ಆಶ್ರಯ ಕಾಲೊನಿ ಮುಂತಾದವರು ಪಾಲ್ಗೊಂಡಿದ್ದರು.