ಕಲಬುರಗಿ : ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ: ನೋಡಲ್ ಅಧಿಕಾರಿಗಳಾಗಿ ರಮೇಶ್ ಸಂಗಾ ಕಾರ್ಯಾರಂಭ
ಕಲಬುರಗಿ : ಎಲ್ಲೆಡೆ ಕೊರೋನಾ ಸೋಂಕಿನ ಎರಡನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಶುಕ್ರವಾರವೇ ಜಾರಿಗೆ ತಂದಿದ್ದು, ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ಭಾಗವಾಗಿಯೇ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಜಿ. ಸಂಗಾ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಶನಿವಾರ ಸಂಗಾ ಅವರು ಕೋವಿಡ್ ನಿಯಂತ್ರಣಕ್ಕಾಗಿನ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದರು.
ನಗರ ವ್ಯಾಪ್ತಿಯಲ್ಲಿನ ಕೋವಿಡ್ ನಿಯಂತ್ರಣದ ಹೊಣೆಯನ್ನು ರಮೇಶ್ ಸಂಗಾ ಅವರು ಹೊತ್ತಿದ್ದು, ಆ ಹಿನ್ನೆಲೆಯಲ್ಲಿ ನಗರದ ಹಲವಾರು ಪ್ರದೇಶಗಳಿಗೆ ಸಂಗಾ ಅವರು ಭೇಟಿ ನೀಡಿದರು. ಸೋಂಕಿತರು ಹಾಗೂ ಸಂಪರ್ಕಿತರನ್ನು ಗುರುತಿಸಿ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಿದರು.
ಕೋವಿಡ್ ನಿಯಂತ್ರಣದ ನೋಡಲ್ ಅಧಿಕಾರಿಗಳಾಗಿರುವ ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ್ ಜಿ. ಸಂಗಾ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಜಶೇಖರ್ ಮಾಲಿ ಅವರನ್ನು ಭೇಟಿ ಮಾಡಿದ ನಂತರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸುವ ಮುನ್ನವೇ ತಾರಫೈಲ್ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್- 19 ಲಸಿಕೆಯನ್ನು ಪಡೆದರು.
ಸಂಗಾ ಅವರು ನಂತರ ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರಿಗೆ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಿದರು. ತಾರಫೈಲ್ ಪ್ರದೇಶದಲ್ಲಿ ಇಬ್ಬರು, ಓಂನಗರ ಪ್ರದೇಶದಲ್ಲಿ ಮೂವರು ಸಂಪರ್ಕಿತರ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡರು.
ಖೂಬಾ ಪ್ರದೇಶ ಸೇರಿದಂತೆ ಕೋವಿಡ್-19 ಸೋಂಕಿತರೊಂದಿಗೆ ಬರುವ ಸಂಪರ್ಕಿತರನ್ನು ಗುರುತಿಸಿದ ಸಂಗಾ ಅವರು, ಸಂಪರ್ಕಿತರು ಓಡಾಡಿದ ಸ್ಥಳದಲ್ಲಿನ ದ್ವಿತೀಯ ಸಂಪರ್ಕಿತರನ್ನೂ ಸಹ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ರಮೇಶ್ ಜಿ. ಸಂಗಾ ಅವರು ಮಾತನಾಡಿ, ಕೋವಿಡ್- 19 ನಿಯಂತ್ರಣಕ್ಕಾಗಿ ನನಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದಲ್ಲದೇ ಸಂಪರ್ಕಿತರು ಸಂಚರಿಸುವ ಕಿರಾಣಿ ಅಂಗಡಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ರ್ಯಾಂಡಮ್ ಪರೀಕ್ಷೆಯ ಮೂಲಕ ಕೋವಿಡ್ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈಗಾಗಲೇ ಕೋವಿಡ್ ಎರಡನೇ ಅಲೆಯ ಭೀತಿಯು ಮುಂದುವರೆದಿದೆ. ಕೋವಿಡ್ ಸಾವಿನ ಸಂಖ್ಯೆ 331ಕ್ಕೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿಯವರೆಗೆ ನಿಯಂತ್ರಣವಾಗಿದೆ ಎಂದು ನಿಟ್ಟಿಸಿರು ಬಿಟ್ಟಿದ್ದ ಜಿಲ್ಲೆಯ ಜನತೆಗೆ ನೆರೆಯ ಮಹಾರಾಷ್ಟ್ರದಲ್ಲಿನ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದಿಂದಾಗಿ ನಿಬ್ಬೆರಗಾಗಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 2ನೇ ಅಲೆ ತಡೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ 83ನೇ ಸಲಹಾ ಸಭೆಯು ಹೊಸ ನಡಾವಳಿಯನ್ನು ಸಹ ರೂಪಿಸಿದೆ. ಬೆಳಗಾವಿ, ಬೆಂಗಳೂರು ನಗರ, ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉಡುಪಿ, ತುಮಕೂರು, ವಿಜಯಪೂರ ಮುಂತಾದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆ ಹಿನ್ನೆಲೆಯಲ್ಲಿ ಆ ಸ್ಥಳಗಳಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಕಲಬುರ್ಗಿ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಸಹ ಸೋಂಕಿತರ ಸಂಪರ್ಕಿತರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಜಿಲ್ಲಾಡಳಿತಗಳು ಕೈಗೊಂಡಿವೆ.