ಒಂದೇ ದಿನ 20 ಲಕ್ಷ ಮಂದಿಗೆ ಕೋವಿಡ್ ಲಸಿಕೆ; ಈ ವರೆಗಿನ ಗರಿಷ್ಠ ಸಾಧನೆ ಎಂದ ಕೇಂದ್ರ ಸರ್ಕಾರ
ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಶುಕ್ರವಾರ ಗಣನೀಯ ಸಾಧನೆ ಮಾಡಿದ್ದು, ಒಂದೇ ದಿನ 20 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಹೌದು.. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ‘ದೇಶದಾದ್ಯಂತ ಶುಕ್ರವಾರ ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದು ಈ ವರೆಗಿನ ಒಂದು ದಿನದ ಗರಿಷ್ಠ ಲಸಿಕೆ ವಿತರಣೆಯಾಗಿದೆ. ಆ ಮೂಲಕ ದೇಶದಲ್ಲಿ ಈ ವರೆಗೂ ಒಟ್ಟಾರೆ 2.82 ಕೋಟಿ (2,82,18,457) ಡೋಸ್ ಲಸಿಕೆ ವಿತರಣೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ನೀಡಲಾದ 20.54 ಲಕ್ಷ ಡೋಸ್ ಲಸಿಕೆ ವಿತರಣೆಯಾಗಿದ್ದು, ಈ ಪೈಕಿ16,39,663 ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 4,13,874 ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. ಅಂತೆಯೇ ಈ ಪೈಕಿ 8 ರಾಜ್ಯಗಳು ಶೇ 74ರಷ್ಟು ಲಸಿಕೆಯನ್ನು ನೀಡಿವೆ. ಇದರಲ್ಲಿ 3.3 ಲಕ್ಷ ಲಸಿಕೆ ಡೋಸ್‌ಗಳೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅತೀ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡಿದ ರಾಜ್ಯಗಳ ಪಟ್ಟಿಯಲ್ಲೂ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಶೇ. 9.71ರಷ್ಟು ಅಂದರೆ 4,99,242 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
‘ಜನವರಿ 16 ರಂದು ಆರಂಭಿಸಿದ ಕೋವಿಡ್–19 ವಿರುದ್ಧದ ಲಸಿಕೆ ಅಭಿಯಾನದಲ್ಲಿ ಭಾರತವು ಮಹತ್ತರದ ಮೈಲಿಗಲ್ಲು ಸಾಧಿಸಿದೆ. ಲಸಿಕೆ ಅಭಿಯಾನದ 56ನೇ ದಿನ 20 ಲಕ್ಷಕ್ಕೂ ಹೆಚ್ಚು (20,53,537) ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ದೈನಂದಿನ ಲಸಿಕೆ ಪ್ರಮಾಣವಾಗಿದೆ’ ಎಂದು ಸಚಿವಾಲಯ ಪ್ರಕಣಟೆಯಲ್ಲಿ ತಿಳಿಸಿದೆ.