ಮತ್ತೆ ಅಖಾಡಕ್ಕಿಳಿದ ಬಂಗಾಳದ ಹೆಣ್ಣುಲಿ: ವೀಲ್‌ ಚೇರ್‌ನಲ್ಲಿ ಕುಳಿತು ಮಮತಾ ಬ್ಯಾನರ್ಜಿ ಚುನಾವಣಾ ರ‍್ಯಾಲಿ

ಹೈಲೈಟ್ಸ್‌:

  • ದಾಳಿಗೊಳಗಾದ ನಾಲ್ಕೇ ದಿನದಲ್ಲಿ ಮತ್ತೆ ಫೀಲ್ಡಿಗಿಳಿದ ಮಮತಾ ಬ್ಯಾನರ್ಜಿ
  • ವೀಲ್‌ ಚೇರ್‌ನಲ್ಲಿ ಕುಳಿತುಕೊಂಡೇ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಬಂಗಾಳ ಸಿಎಂ
  • ನಂದಿಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಮಮತಾ ಅವರ ಮೇಲೆ ಐದು ಮಂದಿ ಅನಾಮಿಕರು ಹಲ್ಲೆ ನಡೆಸಿದ್ದರು

ಕೋಲ್ಕತಾ: ನಾಲ್ಕು ದಿನಗಳ ಹಿಂದೆ ನಂದಿಗ್ರಾಮದಲ್ಲಿ ಚುನಾವಣೆ ಪ್ರಚಾರ ವೇಳೆ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಚುನಾವಣಾ ಪ್ರಚಾರಕ್ಕೆ ಇಳಿಯಲಿದ್ದಾರೆ.

ಭಾನುವಾರ ಕೋಲ್ಕತಾದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ವೀಲ್‌ ಚೇರ್‌ನಲ್ಲಿ ಕುಳಿತು ಭಾಗಿಯಾಗಲಿದ್ದಾರೆ. ಅಲ್ಲದೇ ಹಾಝ್ರಾದಲ್ಲಿ ನಡೆಯುವ ರ‍್ಯಾಲಿಯ ಸಮರೋಪದಲ್ಲಿ ದೀದಿ ಭಾಷಣ ಮಾಡಲಿದ್ದಾರೆ. ಇದು ಅವರು ಗಾಯಗೊಂಡ ಬಳಿಕ ಭಾಗವಹಿಸುತ್ತಿರುವ ಮೊದಲ ಸಾರ್ವಜನಿಕ ಸಭೆಯಾಗಲಿದೆ.

ನಂದಿಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಮಮತಾ ಅವರ ಮೇಲೆ ಐದು ಮಂದಿ ಅನಾಮಿಕರು ಹಲ್ಲೆ ನಡೆಸಿದ್ದರು. ಬಳಿಕ ಅವರನ್ನು ಕೋಲ್ಕತಾದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಳಿಕ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ರವಾನೆ ಮಾಡಿದ್ದ ಮಮತಾ ಬ್ಯಾನರ್ಜಿ, ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೇ ಇನ್ನೆರಡು ದಿನಗಳಲ್ಲಿ ಚುನಾವಣಾ ಪ್ರಚಾರಕ್ಕೆ ಧುಮುಕುವುದಾಗಿಯೂ ಹೇಳಿದ್ದರು.

ಇದೀಗ ಮಮತಾ ಅವವರು ಗಾಯಗೊಂಡು ನಾಲ್ಕು ದಿನ ಮಾತ್ರ ಕಳೆದಿದ್ದು, ವೀಲ್‌ಚೇರ್‌ನಲ್ಲಿ ಕುಳಿತುಕೊಂಡು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.

ದೀದಿ ಮೇಲಿನ ಹಲ್ಲೆಗೆ ಕೆಂಡವಾಗಿರುವ ಟಿಎಂಸಿ ಇದು ಅವರ ಕೊಲೆಗೆ ನಡೆಸಿದ ಸಂಚು ಎಂದು ದೂರಿದೆ. ಅಲ್ಲದೇ ಬಿಜೆಪಿಯೇ ಇದಕ್ಕೆ ನೇರ ಕಾರಣ ಎಂದು ಆಪಾದಿಸಿದೆ.

ಆದರೆ ಬಿಜೆಪಿ ಇದನ್ನು ತಳ್ಳಿ ಹಾಕಿದ್ದು, ಟಿಎಂಸಿ ಕಾರ್ಯಕರ್ತರೇ ಈ ದಾಳಿ ನಡೆಸಿದ್ದಾರೆ. ಟಿಎಂಸಿ ನಾಯಕರು ಸುಖಾಸುಮ್ಮನೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದೆ. ಅಲ್ಲದೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮಾರ್ಚ್‌ ಏಳರಿಂದ ಒಟ್ಟು ಎಂಟು ಹಂತಗಳಲ್ಲಿ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧೆ ಮಾಡುತ್ತಿದ್ದು, ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *