ಮತ್ತೊಮ್ಮೆ ಲಾಕ್‌ಡೌನ್ ಆಗಬಾರದು ಎಂದರೆ ಜನರೇ ಹೆಚ್ಚಿನ ಸುರಕ್ಷತೆ ವಹಿಸಬೇಕು: ಸಿಎಂ ಬಿಎಸ್ವೈ ಎಚ್ಚರಿಕೆ
ಬೆಂಗಳೂರು: ಕೋವಿಡ್ -19 ಅವಲೋಕನಕ್ಕಾಗಿ ತಜ್ಞರ ಜೊತೆ ಸಮಾಲೊಚನೆ ನಡೆಸಲಾಗಿದೆ. ತಜ್ಞರ ಅಭಿಪ್ರಾಯದಂತೆ ಕಳೆದ 14 ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್ ಎರಡನೇ ಅಲೆಯ ಮುನ್ಸೂಚನೆ ಇದೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಳಕ್ಕೆ ಸಲಹೆ ನೀಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ಮತದಾರರ ಪಟ್ಟಿಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ನೀಡಲಾಗುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಸಿಕೆ ಹಂಚಲಾಗುವುದು. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಾಗಿ ದಂಡ ವಿಧಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಮದುವೆ, ಸಮಾರಂಭಗಳಲ್ಲಿ500 ಜನ ಮೀರುವಂತಿಲ್ಲ. ಪರೀಕ್ಷೆಯ ಪ್ರಮಾಣ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚುವುದು, ವೆಂಟಿಲೇಟರ್ ಸೌಲಭ್ಯ ಒದಗಿಸಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಒತ್ತು ನೀಡಲಾಗುತ್ತದೆ. ಸಾರಿಗೆ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರ ಹೆಚ್ಚಿನ ನಿಗಾ ವಹಿಸಲಿದೆ ಎಂದು ಮಾಹಿತಿ ನೀಡಿದರು.