ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಭೀತಿ
ರಾಜ್ಯದಲ್ಲಿ ಕಳೆದ 14 ದಿನಗಳಲ್ಲಿ ಕೋರೋನೋ ಸೋಂಕಿನ ಪಾಸಿಟೀವ್ ಪ್ರಕರಣ ಹೆಚ್ಚಾಗಿದ್ದು ಎರಡನೇ ಅಲೆಯ ಮುನ್ಸೂಚನೆಯಾಗಿದೆ. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರಕ್ಕೆ ಒತ್ತು ನೀಡಬೇಕು .ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಲಾಕ್ಡೌನ್ ಮಾಡುವ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಡಿ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ. ಇಲ್ಲದಿದ್ದರೆ ಅನಿವಾರ್ಯವಾಗಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ 19ರ ಕುರಿತು ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ,ಉಡುಪಿ, ತುಮಕೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ ಎಂದರು
ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಬೇಕಾಗಿದೆ. ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ. ಆದರೆ ಇತರ ಮುಂಚೂಣಿಯ ಸಿಬ್ಬಂದಿಯಲ್ಲಿ ಶೇ. 58 ರಷ್ಟು ಮಾತ್ರ ಲಸಿಕೆ ಪಡೆದಿದ್ದಾರೆ. ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಲಸಿಕೆ ಹಾಕಲು ಕ್ರಮ ವಹಿಸುವಂತೆ ಸೂಚಿಸಿದರು.
ಮತದಾರರ ಪಟ್ಟಿಯನ್ನು ಆಧರಿಸಿ, ಹಿರಿಯ ನಾಗರಿಕರನ್ನು ಗುರುತಿಸಿ, ಲಸಿಕೆ ಹಾಕುವುದು.ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಲು ಕ್ರಮ ವಹಿಸುವುದು ಎಂದು ಅವರು ತಿಳಿಸಿದ್ದಾರೆ