ಕಲಬುರಗಿ : ಕುರಾನ್ನಲ್ಲಿನ 26 ಆಯಾತಗಳನ್ನು ವಿರೋಧಿಸಿದ ವಸಿಮ್ ರಿಜ್ವಿ ವಿರುದ್ಧ ಮುಸ್ಲಿಂ ಮಹಿಳೆಯರ ಪ್ರತಿಭಟನೆ
ಕಲಬುರಗಿ : ಕುರಾನ್ನಲ್ಲಿನ 26 ಆಯಾತ್ಗಳನ್ನು ತೆಗೆಯಬೇಕೆಂದು ಸುಪ್ರಿಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಶಿಯಾ ಧರ್ಮದ ಮಾಜಿ ವಕ್ಫ್ ಅಧ್ಯಕ್ಷ ವಸಿಮ್ ರಿಜ್ವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಆರ್ಎಸ್ಕೆ ಎಂಪಾವರ್ಮೆಂಟ್ ಆಂಡ್ ಚಾರಿಟೇಬಲ್ ಸಂಘಟನೆಯ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಐ ಖೌಲೇ ಮೊಹ್ಮದ್, ಖೌಲೇ ಖುದಾ ಫರಮಾನನಾ ಬದಲಾ ಜಾಯೇಗಾ, ಬದಲೇಗಾ ಜಮಾನಾ ಲಾಖ್ ಮಗರ್ ಖುರಾನ್ ನಾ ಬದಲಾಯ್ ಜಾಯೇಗಾ. ಪವಿತ್ರ ಕುರಾನ್ ಧರ್ಮ ಗ್ರಂಥವು ಕೇವಲ ಮುಸ್ಲಿಂರಿಗೆ ಸೀಮಿತವಾಗದೇ ಇಡೀ ಮಾನವ ಕುಲಕ್ಕೆ ಅನುಗ್ರಹಕರವಾಗಿದೆ. ಧರ್ಮ ಗ್ರಂಥವನ್ನು ತಾನು ಸರಿಯಾಗಿ ಅರ್ಥೈಸಿಕೊಳ್ಳದೇ ಇಡೀ ಮಾನವ ಕುಲವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ರಿಜ್ವಿ ಮಾಡಿದ್ದಾರೆ. ಕುರಾನಿನಲ್ಲಿ ಇರುವ ಒಂದು ಶಬ್ದವನ್ನು ಯಾರಿಂದಲೂ ಬದಲಾಯಿಸಲು ಬರುವುದಿಲ್ಲ. ಆದಾಗ್ಯೂ, ದುರುದ್ದೇಶ ಪೂರ್ವಕವಾಗಿ ಇಂತಹ ಕೃತ್ಯಕ್ಕೆ ಕೈ ಹಾಕಿರುತ್ತಾನೆ. ಇಂತಹ ಸೈತಾನ್ನ ವಿರುದ್ಧ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಮಾರ್ಚ್ 11ರಂದು ದೆಹಲಿ ಸುಪ್ರಿಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ನಲ್ಲಿ ಇರುವ 26 ವೇದ ವಾಕ್ಯ (ಆಯಾತ್ಗಳನ್ನು) ತೆಗೆಯಬೇಕು. ಆ ಪಠಣೆಗಳನ್ನು ಉಚ್ಛಾರಣೆಯಿಂದ ಜಿಹಾದ್, ಉಗ್ರವಾದಕ್ಕೆ ಎಡೆಮಾಡಿಕೊಡುತ್ತವೆ. ಮೊಹ್ಮದ್ ಅವರ ನಂತರದ ಖಲೀಫಾಗಳು ತನ್ನ ಪ್ರಭಾವ ಬಳಸಿ ಕುರಾನಿನಲ್ಲಿ ಇಂತಹ ಆಯಾತಗಳನ್ನು ಜೋಡಿಸಲಾಗಿದೆ ಎನ್ನುವ ಬಲವಾದ ಆರೋಪ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಸೀಮ್ ರಿಜ್ವಿ ಅವರು ಸಲ್ಲಿಸಿದ್ದಾರೆ. ಇದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ಸಂಘಟನೆಯ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಶಫಿಯಾ ಶಿರೀನ್ ಖಾನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಜಿದ್ ಅಲಿ, ಸೈಯೀದ್ ರಬಿಯಾ, ಅಬ್ದುಲ್ ರವೂಫ್, ನಸೀಮ್, ಆಯೇಷಾ ಮುಂತಾದವರು ಪಾಲ್ಗೊಂಡಿದ್ದರು.