ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ತಜ್ಞರೊಂದಿಗೆ ಸಿಎಂ ಸಭೆ, ಮಾಸ್ಕ್ ಧರಿಸದಿದ್ದರೆ ದಂಡದ ಎಚ್ಚರಿಕೆ..

ಬೆಂಗಳೂರು: ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ  ಸಂಜೆ ವಿಧಾನಸೌಧದಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿ ಕೋವಿಡ್ ಕುರಿತು ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದರು.

ಸಭೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ , ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ದಂಡ ಹೆಚ್ಚಳ ಹಾಗೂ ಲಸಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ಸೇರಿದಂತೆ ಇತರೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಕೋವಿಡ್ ಪರಿಸ್ಥಿತಿ ಅವಲೋಕನ ನಡೆಸಿ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ತಜ್ಞರ ಅಭಿಪ್ರಾಯದಂತೆ 14 ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಬೀದರ್ ಕಲಬುರಗಿ, ಬೆಂಗಳೂರುಗ್ರಾಮಾಂತರ ಉಡುಪಿ ತುಮಕೂರು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೋವಿಡ್ ಎರಡನೆ ಅಲೆಯ ಭೀತಿಗೆ ಲಸಿಕೆ ಕಾರ್ಯಕ್ರಮ ಹೆಚ್ಚಳ ಮಾಡಬೇಕಿದೆ ಎಂದರು.

ಆರೋಗ್ಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳಿಗೆ ಶೇ.50 ರಷ್ಟು ಲಸಿಕೆ ಹಾಕಲಾಗಿದೆ. ಕೋವಿಡ್ ಅನ್ನು ನಿಯಂತ್ರಿಸುವ ಸಂಬಂಧ ಮತದಾರರ ಪಟ್ಟಿಯನ್ನಾಧರಿಸಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಾಸ್ಕ್  ಹಾಕದವರಿಗೆ ದಂಡ ವಿಧಿಸುವುದು ಅನಿವಾರ್ಯ. ಮದುವೆ ಮತ್ತು ಧಾರ್ಮಿಕ ,ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಖ್ಯೆಯನ್ನು 500 ಜನಕ್ಕೆ ಮಿತಿ ಗೊಳಿಸುವುದು. ರೋಗಿಗಳು ಮತ್ತು ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಕೋವಿಡ್ ಆಸ್ಪತ್ರೆಗೆ ಸಿದ್ದತೆ ಮಾಡಿಕೊಳ್ಳುವುದು, ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹೆಚ್ಚಿಸಲಾಗುವುದು. ಕೋವಿಡ್ ಕುರಿತ ಜಾಗೃತಿಗೆ ಸಾಮಾಜಿಕ ಸೇವಾ ಸಂಸ್ಥೆಗಳಾದ ರೋಟರಿ, ಲಯನ್ಸ್ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ಲಸಿಕೆ ಹಾಗೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆ ಮೇರೆಗೆ ಪಕ್ಕದ ಮಹಾರಾಷ್ಟ್ರ ಮತ್ತು ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಕಟ್ಟುನಿಟ್ಟಾದ ನಿಗಾ ವಹಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು.

ಇದೇ ಮಾರ್ಚ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೋವಿಡ್ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುತ್ತಿದ್ದು,  ಮಾಸ್ಕ್ ಧರಿಸದಿದ್ದರೆ ದಂಡ ಪಾವತಿಯನ್ನು 250 ರೂ.ಗೆ ಹೆಚ್ಚಿಸುವ ಬಗ್ಗೆ ಇನ್ನು ನಾಲ್ಕೈದು ದಿನಗಳಲ್ಲಿ ಮತ್ತೆ ಹೆಚ್ಚಳದ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು.ಇದಕ್ಕೆ ಜನರ ಸಹಕಾರ ನೀಡುವಂತೆ ಸಿಎಂ ಮನವಿ ಮಾಡಿದರು.

ವ್ಯಾಕ್ಸಿನೇಷನ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕು. ಕನಿಷ್ಟ 3 ಲಕ್ಷ ಹಚ್ಚಳ ಮಾಡಲಾಗುವುದು.ಇದುವರೆಗೂ ಶಾಲಾ ಕಾಲೇಜುಗಳ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *