Coronavirus | ಇಂದು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಸಭೆ; ಮುನ್ನೆಚ್ಚರಿಕೆ ಪಾಲಿಸದಿದ್ದರೆ ಕಠಿಣ ನಿಯಮ ಅನಿವಾರ್ಯ
ಬೆಂಗಳೂರು: ಕೊರೋನಾ ಎರಡನೇ ಅಲೆಯ ಲಕ್ಷಣಗಳು ದೇಶದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಸಚಿವ ಸುಧಾಕರ್ ಅವರು, ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ ಅಂತ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಸಿಎಂ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ಇಂದಿನಿಂದ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಲಸಿಕೆ ವಿತರಣೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಇದುವರೆಗೂ 15 ಲಕ್ಷ ಜನರಿಗೆ ಲಸಿಕೆ ನೀಡಿದ್ದೇವೆ. ಪ್ರತಿ ದಿನ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ 100 ಜನರಿಗೆ ಟೆಸ್ಟ್ ಮಾಡಲೇಬೇಕು. ಜನರಲ್ ಆಸ್ಪತ್ರೆಗಳಲ್ಲಿ 500 ಜನರಿಗೆ ಲಸಿಕೆ ಟಾರ್ಗೆಟ್ ನೀಡಿದ್ದೇವೆ. ಪ್ರತಿ ಸೋಂಕಿತ ವ್ಯಕ್ತಿಗೆ 20 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಲೇ ಬೇಕು ಎಂದು ಸಚಿವರು ಹೇಳಿದರು.
ಗಡಿ ರಾಜ್ಯಗಳಲ್ಲಿ ಸೋಂಕು ಏರಿಕೆ ಆಗಿರೋದೇ ಜಿಲ್ಲೆಗಳಲ್ಲಿ ಕೊರೊನಾ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಭೆ ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ಮಾಡಲಾಗುವುದು ಎಂದರು. ಪ್ರತಿಭಟನೆ, ಸಿನಿಮಾ ಹಾಲ್ ಗಳಿಗೆ ಟಫ್ ರೂಲ್ಸ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸುಧಾಕರ್ ಅವರು ಬುಧವಾರ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸುತ್ತಾರೆ. ಬಹಿರಂಗ ಸಭೆ-ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ವಿಚಾರ ಕೂಡ ಆ ಬಳಿಕ ನಿರ್ಧಾರ ಆಗುತ್ತದೆ ಎಂದು ಸಚಿವ ಡಾ.ಕೆ ಸುಧಾಕರ್ ವಿವರಿಸಿದರು.