ಈ ಸರ್ಕಾರಿ ಕಚೇರಿಯಲ್ಲಿ 2 ನಿಮಿಷ ಬೇಗ ಹೊರಟರೂ ವೇತನಕ್ಕೆ ಬೀಳುತ್ತೆ ಕತ್ತರಿ
ಟೋಕಿಯೊ: ಭಾರತದಲ್ಲಿ ಸರ್ಕಾರಿ ಕೆಲಸ (Goverment job) ಸಿಕ್ಕಿದರೆ ಜೀವನ ಪೂರ್ತಿ ಆರಾಮವಾಗಿ ಇರಬಹುದು ಎಂದೇ ನಂಬಲಾಗುತ್ತದೆ. ಆರಾಮವಾಗಿರಬೇಕು ಎಂದರೆ ಸರ್ಕಾರಿ ಕೆಲಸ ಸಿಗಬೇಕು ಎಂದು ಹೇಳುವವರೇ ಹೆಚ್ಚು. ಸರ್ಕಾರಿ ನೌಕರಿ ಎಂದರೆ ಎಷ್ಟು ಹೊತ್ತಿಗೆ ಹೋದರು ನಡೆಯುತ್ತೆ ಬಂದರು ನಡೆಯುತ್ತೆ ಎಂಬ ಭಾವನೆ ಇಂದಿಗೂ ನಮ್ಮಲ್ಲಿ ಅನೇಕರಲ್ಲಿದೆ. ಆದರೆ ಜಪಾನ್ನಲ್ಲಿ ಹೀಗಲ್ಲ. ಖಾಸಗಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರಷ್ಟೇ ಜಪಾನ್ನ (Japan) ಸರ್ಕಾರಿ ನೌಕರರು ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ ನಿಗದಿತ ಸಮಯದವರೆಗೆ ಕಚೇರಿಯಲ್ಲೇ ಇರಬೇಕಾಗುತ್ತದೆ.
ಸಮಯಕ್ಕೆ ಮುಂಚಿತವಾಗಿ ಮನಗೆ ಹೊರಟರೆ ಸಂಬಳ ಕಟ್ :
ಜಪಾನಿಯರು (Japan) ಎಲ್ಲವನ್ನೂ ಪರಿಪೂರ್ಣತೆಯಿಂದ ಮಾಡುತ್ತಾರೆ. ಹರ ಸಾಹಸ ಪಟ್ಟು ಸಮಯಕ್ಕೆ ಸರಿಯಾಗಿ ಕಚೇರಿ ತಲುಪುತ್ತಾರೆ. ಇದೇ ಕಾರಣಕ್ಕೆ ಜಪಾನ್ನ ಶಿಂಚೆನ್ ರೈಲಿನಲ್ಲಿ ಕಾಲಿಡಲು ಸ್ಥಳವಿರುವುದಿಲ್ಲ. ಇಡೀ ವಿಶ್ವಕ್ಕೆ ಹೋಲಿಸಿದರೆ ಜಪಾನ್ನಲ್ಲಿ ಸರ್ಕಾರಿ ನೌಕರರ (Government employee) ಔಟ್ಪುಟ್ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಇಲ್ಲಿ ಸಮಯಕ್ಕೆ ಸರಿಯಾಗಿ ಕಚೇರಿ ತಲುಪದಿದ್ದರೂ ಶಿಕ್ಷೆಯಾಗುತ್ತದೆ. ಸಮಯಕ್ಕೆ ಮುಂಚಿತವಾಗಿ ಕಚೇರಿ ಬಿಟ್ಟರೂ ದಂಡ ತೆರಬೇಕಾಗುತ್ತದೆ.
ಬಹಳಷ್ಟು ನೌಕರರ ವೇತನಕ್ಕೆ ಕತ್ತರಿ :
ಜಪಾನಿನ ಮಾಧ್ಯಮ ಸಂಸ್ಥೆ ದಿ ಸಂಕೈ ನ್ಯೂಸ್ ಪ್ರಕಾರ, ಮೇ 2019 ಮತ್ತು ಜನವರಿ 2021 ರ ನಡುವೆ 316 ಉದ್ಯೋಗಿಗಳು ಎರಡು ನಿಮಿಷಗಳ ಮುಂಚಿತವಾಗಿ ಕಚೇರಿಯಿಂದ ಹೊರಟರು ಎಂಬ ಕಾರಣಕ್ಕೆ ಸಂಬಳವನ್ನು (Salary) ಕಡಿತಗೊಳಿಸಲಾಗಿದೆ. ಎರಡು ನಿಮಿಷಗಳ ಮೊದಲು ಕಚೇರಿಯಿಂದ ಹೊರಡಲು ಅವರ ಬಳಿ ಬಹು ದೊಡ್ಡ ಕಾರಣವಿದ್ದರೂ, ನಿಯಮವನ್ನು ಪಾಲಿಸಲಾಗಿದೆ. ಯಾವ ಕಾರಣವಿದ್ದರೂ, ಯಾವ ವಿನಾಯಿತಿಯನ್ನು ನೀಡಲಾಗಿಲ್ಲ.
ಜಪಾನ್ನ ಚಿಬಾ ಪ್ರಾಂತ್ಯದ ಫನಬಾಶಿ ಸಿಟಿ ಬೋರ್ಡ್ ಆಫ್ ಎಜುಕೇಶನ್ ಕಠಿಣ ನಿಲುವೊಂದನ್ನು ತೆಗೆದುಕೊಂಡಿತು. ಹಾಜರಾತಿ ಕಾರ್ಡ್ನಲ್ಲಿ ತಪ್ಪಾದ ಸಮಯವನ್ನು ತುಂಬಿದ ನೌಕರರ ಮೇಲೆ ಮಂಡಳಿ ಕಣ್ಣಿಟ್ಟಿತ್ತು. ಈ ಕೆಲಸಕ್ಕಾಗಿ 3 ತಿಂಗಳವರೆಗೆ ವೇತನದಲ್ಲಿ ಕಡಿತಗೊಳಿಸಲಾಗಿತ್ತು. . ಇದಲ್ಲದೆ, ಇನ್ನೊಬ್ಬ ಮಹಿಳೆ ಸಂಜೆ 5.17 ರ ಬದಲು 5.15 ಕ್ಕೆ ತನ್ನ ಕಚೇರಿಯಿಂದ ಹೊರಡುವ ಕಾರಣಕ್ಕಾಗಿ ದಂಡ ಪಾವತಿಸಬೇಕಾಗಿ ಬಂದಿತ್ತು.