ಕಲಬುರಗಿ : ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ವ್ಯಾಪಾರ ಮಾಡುವಂತಿಲ್ಲ: ತಹಸಿಲ್ದಾರ್ ಎಚ್ಚರಿಕೆ

ಕಲಬುರಗಿ : ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಟ್ಟು ನೆಗೆಟಿವ್ ರಿಪೋರ್ಟ್ ಹೊಂದಿದ್ದರೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸೇಡಂ ತಹಸಿಲ್ದಾರ್ ಬಸವರಾಜ್ ಬೆಣ್ಣೆಶಿರೂರ್ ಅವರು ಖಡಕ್ ಎಚ್ಚರಿಕೆ ನೀಡಿದರು.
ಸೇಡಂ ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ಕುರಿತ ಜಾಗೃತಿ ಮತ್ತು ಲಸಿಕೆ ವಿತರಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ತಹಸಿಲ್ದಾರ್ ಅವರ ಅನುಮತಿ ಇಲ್ಲದೇ ಯಾವುದೇ ರೀತಿಯ ಮದುವೆ, ಜಾನುವಾರು ಸಂತೆ, ಮೆರವಣಿಗೆ, ವಾರದ ಸಂತೆ ನಡೆಸುವಂತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಕ್ಷಣಗಳಿರುವ ರೋಗಿಗಳನ್ನು ಕಡ್ಡಾಯವಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸುವಂತಾಗಬೇಕು. ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಸಿಮೆಂಟ್ ಕಾರ್ಖಾನೆಗಳಿಗೆ ಬರುವ ವಿವಿಧ ರಾಜ್ಯಗಳ ಜನರ ಮಾಹಿತಿಯನ್ನು ತಹಸಿಲ್ದಾರ್ ಕಚೇರಿಗೆ ನೀಡಬೇಕು. ನಗರ ಪ್ರದೇಶಗಳಲ್ಲಿ ಜಾತ್ರೆ, ಸಂತೆ, ಮದುವೆ ಹಾಗೂ ಉರುಸ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಿಗರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕಿಕೊಳ್ಳುವ ಕುರಿತು ನಿಗಾ ವಹಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಸುರೇಶ್ ಮೇಕಿನ್ ಅವರು ಮಾತನಾಡಿ, ಕೊರೋನಾ ಲಸಿಕೆ ಹೆಚ್ಚಿನ ಮಟ್ಟದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರೂ ಸೂಚಿತ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ಪಡೆಯಬೇಕು ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *