ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪಕ್ಷಾತೀತ ಹೋರಾಟಕ್ಕೆ ಕೋರ್ ಕಮಿಟಿ ನಿರ್ಧಾರ
ಕಲಬುರಗಿ : ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಸಾಯಂಕಾಲ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಸಮಿತಿಯ ಕೋರ್ ಕಮಿಟಿಯ ಸಭೆ ಜರುಗಿತು.
ಸಭೆಯಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ್ ಜಾಜು, ಲಿಂಗರಾಜ್ ಸಿರಗಾಪೂರ, ಸಿದ್ದಾರೆಡ್ಡಿ ಬಲಕಲ್, ಶಿವಲಿಂಗಪ್ಪ ಬಂಡಕ್, ಮಹ್ಮದ ಮಿರಾಜೋದ್ದೀನ್, ಸುನೀಲ್ ಕುಲಕರ್ಣಿ, ಗುರುರಾಜ್ ಭಂಡಾರಿ, ಇಂದುಧರ ಜಾಧವ್, ಆನಂದ್ ದೇಶಪಾಂಡೆ, ಅಬ್ದುಲ್ ರಹೀಮ್, ಎಚ್.ಎಂ. ಹಾಜಿ, ಭದ್ರಶೆಟ್ಟಿ, ಅಣ್ಣಾರಾವ್ ಹೆಬ್ಬಾಳ, ಕಲ್ಯಾಣರಾವ್ ಪಾಟೀಲ್, ಚಂದ್ರಶೇಖರ್ ಮೇಕಿನ್, ಅಶೋಕ್ ಗುರುಜಿ, ಅಸ್ಲಂ ಚೌಂಗೆ, ಜ್ಞಾನ ಮಿತ್ರ ಸ್ಯಾಮ್ಯುವೆಲ್, ಸಂಧ್ಯಾರಾಜ್, ವೀರೇಶ ಪುರಾಣಿಕ್, ಬಸವರಾಜ್ ಚಿಟಗುಪ್ಪಿ, ಡಾ. ಮಾಜಿದ್ ದಾಗಿ, ಮಲ್ಲಿನಾಥ್ ಸಂಗಶೆಟ್ಟಿ, ಮಖ್ಬೂಲ್ ಪಟೇಲ್, ಪ್ರಭು ಪಾಟೀಲ್, ಗುರುಲಿಂಗಪ್ಪ ಟೆಂಗಳಿ, ಸಾಜಿದ್ ಅಲಿ ರಂಜೋಲಿ, ಶಾಂತಪ್ಪ ಕಾರಭಾಸಗಿ, ಬಾಬಾ ಫಕ್ರೋದ್ದೀನ್ ಮುಂತಾದವರು ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಭಿವೃದ್ಧಿ ವಿಷಯದಲ್ಲಿ ಆಗುತ್ತಿರುವ ಮಲತಾಯಿ ಧೋರಣೆ ಮತ್ತು ನಿರ್ಲಕ್ಷತನದ ಬಗ್ಗೆ ಎಲ್ಲರೂ ಖಂಡಿಸಿದರು. ಮುಂದಿನ ಹೋರಾಟ ಪಕ್ಷಾತೀತವಾಗಿ ಏಳು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ನಡೆಸಲು ಮುಂದಿನ ರೂಪ ರೇಷೆಗಳನ್ನು ಹಮ್ಮಿಕೊಳ್ಳಲು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ್ ದಸ್ತಿಯವರಿಗೆ ಸರ್ವಾನುಮತದಿಂದ ಅಧಿಕಾರ ನೀಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಣ್ ದಸ್ತಿಯವರು ಮಾತನಾಡಿ, 1984ರ ಸರೀನ್ ಕಮಿಟಿ ವರದಿಯ ಶಿಫಾರಸ್ಸಿನಂತೆ ಮಂಜೂರಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ತಿರಸ್ಕರಿಸಿರುವುದು, ನಂಜುಂಡಪ್ಪ ವರದಿ ಪ್ರಕಾರ ರಾಯಚೂರಿಗೆ ಬರಬೇಕಾದ ಐ.ಐ.ಟಿ. ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿರುವುದು, ನಂಜುಂಡಪ್ಪ ವರದಿಯಂತೆ ಮತ್ತು ಭಾರತ ಸರ್ಕಾರದ 371ನೇ(ಜೆ) ಕಲಂ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಗಬೇಕಾದ ಏಮ್ಸ್ ಹುಬ್ಬಳ್ಳಿ-ಧಾರವಾಡಕ್ಕೆ ಮಂಜೂರು ಮಾಡುತ್ತಿರುವುದು ಕಳೆದ ಅನೇಕ ವರ್ಷಗಳಿಂದ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಒಂದೇ ಒಂದು ಉದ್ಯೋಗ ಸೃಷ್ಟಿಯ ಕಾರ್ಖಾನೆ ಹಾಕದೇ ಇರುವುದು ರೈಲ್ವೆ ಕ್ಷೇತ್ರ, ಹೆದ್ದಾರಿ ಕ್ಷೇತ್ರ ಮುಂತಾಗಿ ಕೇಂದ್ರಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳು ಸಹ ಇಲ್ಲಿಗೆ ಬರದೇ ಇರುವುದು ಅದರಂತೆ ರಾಜ್ಯ ಸರಕಾರ ಹೆಸರಿಗೆ ಮಾತ್ರ ನಮ್ಮ ಭಾಗಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ತನ್ನ ಅಧೀನದಲ್ಲಿ ಬರುವ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಸೇರಿದಂತೆ ಕಾಲಮಿತಿಯಲ್ಲಿ ಅಭಿವೃದ್ಧಿ ಯೋಜನೆಗಳು ಪೂರ್ಣ ಗೊಳಿಸದೇ ಇರುವುದು, ರೆಗ್ಯುಲರ್ ಬಜೆಟ್‍ನಲ್ಲಿ ವಿಶೇಷ ಯೋಜನೆಗಳು ಮಂಜೂರು ಮಾಡದೇ ಅದರಂತೆ ಮಂಜೂರಾಗಿರುವ ಯೋಜನೆಗಳು ಅನುಷ್ಠಾನ ಮಾಡದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 1500 ಕೋಟಿ ಹಣ ನೀಡಿ ಆದ್ಯತೆ ನೀಡಲಾಗಿದೆ ಎಂಬಂತೆ ಬಿಂಬಿಸುವುದು, ನಮ್ಮ ಮೀಸಲಾತಿಯ ಹಕ್ಕಿನ ಸುಮಾರು ಅಂದರೆ ಕಲ್ಯಾಣ ಕರ್ನಾಟಕದ ಪ್ರದೇಶದ ಮತ್ತು ಕಲ್ಯಾಣ ಕರ್ನಾಟಕೇತರ ಪ್ರದೇಶದ ಒಟ್ಟು ಎಪ್ಪತ್ತು ಸಾವಿರ ಹುದ್ದೆಗಳು ನೇಮಕ ಮಾಡದೇ ಇರುವುದು, ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯತೆ ಇಲ್ಲದೇ ಇರುವುದು, ಉಸ್ತುವಾರಿ ಸಚಿವರುಗಳು ಮೂರು ತಿಂಗಳಿಗೊಮ್ಮೆಯಾದರೂ ಬರುವದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಕಲ್ಯಾಣ ಕರ್ನಾಟಕ ಪ್ರದೇಶ ಪ್ರಸ್ತುತ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಘೋರ ಮಲತಾಯಿ ಧೋರಣೆಗೆ ತುತ್ತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರಸ್ತುತ ಈಗ ಪಕ್ಷಾತೀತವಾಗಿ ಏಳು ಜಿಲ್ಲೆಗಳಲ್ಲಿ ಸಂಘಟಿತ ಹೋರಾಟ ಅತಿ ಅವಶ್ಯವಾಗಿದೆ. ಇದಕ್ಕೆ ಪೂರಕವಾಗಿ ಸಮಿತಿ ಇಂದಿನ ಸಭೆಯಲ್ಲಿ ತಮಗೆ ನೀಡಿರುವ ಅಧಿಕಾರದಂತೆ ಎಲ್ಲಾ ಪಕ್ಷಗಳ, ಸಂಘ ಸಂಸ್ಥೆಗಳ ಮತ್ತು ಆಯಾ ಕ್ಷೇತ್ರದ ಮುಖಂಡರ ಜೊತೆ ಮತ್ತು ಚಿಂತಕರ, ಬುದ್ಧಿ ಜೀವಿಗಳ ಜೊತೆ ಸಮಾಲೋಚನೆ ನಡೆಸಿ, ಒಂದೆರಡು ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಪ್ರಕಟಿಸಲಾಗುವುದು ಎಂದು ದಸ್ತಿ ಅವರು ಹೇಳಿದರು.
ಕೋರ್ ಕಮಿಟಿ ಸಭೆಯಲ್ಲಿ ಸಮಿತಿಯ ಇನ್ನೀತರ ಸದಸ್ಯರಾದ ಬಿ.ಬಿ. ಪಾಟೀಲ್, ಅಣ್ಣಾರಾವ್ ಹೆಬ್ಬಾಳ್, ಶಿವರಾಜ್ ಅಂಡಗಿ, ಬಸವರಾಜ್ ಕೆ., ಚಂದ್ರಕಾಂತ್, ಸುಭಾಷ್, ಮಹ್ಮದ್ ಅಲಿ, ವಿಶಾಲದೇವ್, ಶ್ರೀನಿವಾಸ್, ಸುನೀಲ್ ಬಿ., ಮೋಹಿಯೊದ್ದೀನ್ ಸೇರಿದಂತೆ ಕೋರ ಕಮಿಟಿಯ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.