ರಾಜ್ಯದಲ್ಲಿ ಮತ್ತೆ ಲಾಕ್ಡೌನ್?: ‘ಸದ್ಯಕ್ಕಿಲ್ಲ’ ಎಂದ ಕೃಷಿ ಸಚಿವ ಬಿ.ಸಿ ಪಾಟೀಲ್!
ಹೈಲೈಟ್ಸ್:
- ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಇಲ್ಲ ಎಂದ ಕೃಷಿ ಸಚಿವ ಬಿ.ಸಿ ಪಾಟೀಲ್.
- ರಾಜ್ಯದ ಆರ್ಥಿಕ ಪರಿಸ್ಥಿತಿ ಲಾಕ್ಡೌನ್ಗೆ ಅನುವು ಮಾಡಿಕೊಡುವುದಿಲ್ಲ ಎಂದ ಸಚಿವರು.
- ಕೋವಿಡ್ ವಿರುದ್ಧ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದ ಬಿ.ಸಿ ಪಾಟೀಲ್.
- ನ್ಯಾಯಾಲಯಕ್ಕೆ ಹೋಗುವ ನನ್ನ ಹಕ್ಕನ್ನು ಕಾಂಗ್ರೆಸ್ ಏಕೆ ಪ್ರಶ್ನಿಸುತ್ತಿದೆ ಎಂದ ಬಿ.ಸಿ ಪಾಟೀಲ್.
- ಕೇಂದ್ರದ ಕೃಷಿ ಕಾಯ್ದೆಗಳು ರೈತ ಪರ ಎಂದು ಸಮರ್ಥನೆ ನೀಡಿದ ಬಿ.ಸಿ ಪಾಟೀಲ್.
ಬೆಂಗಳೂರು:ಯಾವುದೇ ಕಾರಣಕ್ಕೂ ಸದ್ಯಕ್ಕೆ ಲಾಕ್ಡೌನ್ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾ.22-ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಪ್ರಸಕ್ತ ಆರ್ಥಿಕ ಪರಿಸ್ಥಿಯಲ್ಲಿ ಲಾಕ್ಡೌನ್ ಜಾರಿಗೊಳಿಸುವ ಪರಿಸ್ಥಿತಿ ಇಲ್ಲ.ಕಳೆದ ವರ್ಷಕ್ಕೂ ಈ ವರ್ಷಕ್ಕೂ ಪರಿಸ್ಥಿತಿ ಬೇರೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಜನರೂ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.
ನ್ಯಾಯಾಲಯಕ್ಕೆ ಹೋಗುವುದು ನನ್ನ ಹಕ್ಕಾಗಿದ್ದು, ಅದನ್ನು ಪ್ರಶ್ನಿಸಲು ಕಾಂಗ್ರೆಸ್ನವರಿಗೆ ಯಾವುದೇ ಹಕ್ಕಿಲ್ಲ. ಕಾಂಗ್ರೆಸ್ ನಾಯಕರು ನೀತಿ ಸಿದ್ದಾಂತದ ಮೇಲೆ ಹೊರಾಟ ಮಾಡಬೇಕು.ಅವರಿಗೆ ಹೋರಾಟ ಮಾಡಲು ಯಾವುದೇ ವಿಷಯಗಳು ಸಿಗುತ್ತಿಲ್ಲ.ಹೀಗಾಗಿ ಮೈತ್ರಿ ಸರ್ಕಾರ ಪತನಗೊಂಡ ಕಾರಣಕ್ಕೆ ನಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆಂದು ಬಿ.ಸಿ.ಪಾಟೀಲ್ ಹರಿಹಾಯ್ದರು.
ಇನ್ನು ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇರುವುದರಿಂದ ಈ ಕಾಯ್ದೆಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕೇಂದ್ರದ ನಡೆಯನ್ನು ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.