ಕಲಬುರಗಿ : ಬಿಸಿಲಿಗೆ ಬಳಲಿ ಬೆಂಡಾದವರಿಗೆ ಬಡವರ ಫ್ರಿಡ್ಜ್ ಮಡಿಕೆಗಳೇ ಆಸರೆ
ಕಲಬುರಗಿ : ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕಲ್ಯಾಣ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಸೇರಿ ಇಡೀ ಉತ್ತರ ಕರ್ನಾಟಕದಲ್ಲಿನ ಜನತೆಯು ಬಿಸಿಲಿನ ತಾಒಪಕ್ಕೆ ಬೆಂದು ಬೆಂಡಾಗಿ ಹೋಗುತ್ತಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಗದಗ, ಕೊಪ್ಪಳ್, ಬಳ್ಳಾರಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ಜನರು ಈಗಾಗಲೇ ಬಿಸಿಲಿನ ತಾಪವನ್ನು ಅನುಭವಿಸುತ್ತಿದ್ದಾರೆ.
ಕನಿಷ್ಠ 42ಡಿಗ್ರಿ ಸೆಲ್ಸಿಯಸ್‍ನಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್‍ನಷ್ಟು ಬಿಸಿಲಿನ ಪ್ರಖರತೆಯನ್ನು ಕಲ್ಯಾಣ ಕರ್ನಾಟಕದವರು ಎದುರಿಸಲು ಸಜ್ಜಾಗಬೇಕಾಗಿದೆ. ತಾಪಮಾನ ಹೆಚ್ಚಳದಿಂದ ಆಗುವ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಬಹುತೇಕರು ಬಡವರ ಫ್ರಿಡ್ಜ್ ಎಂದೇ ಕರೆಯಲ್ಪಡುವ ಮಡಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬೆಳಿಗ್ಗೆ 9ರಿಂದ ಬಿಸಿಲಿನ ತಾಪ ಹೆಚ್ಚುತ್ತಾ, ಸಂಜೆ 5 ಗಂಟೆಯ ನಂತರ ಉಷ್ಣತೆ ಇಳಿಯುತ್ತದೆ.
ಬೆಳಿಗ್ಗೆ 9 ಗಂಟೆಗೆ ನಿಗಿ, ನಿಗಿ ಬಿಸಿಲಿನ ತಾಪ ಆರಂಭವಾಗುತ್ತದೆ. ಸಂಜೆ 5 ಗಂಟೆಯೊಳಗಾಗಿ ಅದು ಗರಿಷ್ಠ 44 ಡಿಗ್ರಿ ಸೆಲ್ಸಿಯಸ್‍ನಷ್ಟು ಹೋಗಲಿದೆ. ಮಧ್ಯಾಹ್ನದ ವೇಳೆಯಂತೂ ಜನರು ತಮ್ಮ ಮನೆ ಹಾಗೂ ಕಚೇರಿಗಳಿಂದ ಹೊರಬರಲು ಹಿಂದೇಟು ಹಾಕುತ್ತಾರೆ. ಏನೇ ಕೆಲಸ, ಕಾರ್ಯಗಳಾದರೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿಯೇ ಶಾಪಿಂಗ್, ಮಾಲ್‍ಗಳಿಗೆ ಜನರು ಹೊರಗಡೆ ಬರುತ್ತಿದ್ದಾರೆ.
ಮಧ್ಯಾಹ್ನದ ವೇಳೆ ಪ್ರಮುಖ ರಸ್ತೆಗಳನ್ನು ನೋಡಿದರೆ ಬಿಸಿಲಿನ ತಾಪಕ್ಕೆ ವಾಹನ ಸವಾರರೂ ಸಹ ರಸ್ತೆಗಿಳಿಯುವುದು ಕಡಿಮೆ. ಒಂದು ವೇಳೆ ರಸ್ತೆ ಮೇಲೆ ವಾಹನ ಸವಾರರು ಸವಾರಿ ಮಾಡಿದರೂ ಸಹ ನಿಗಿ, ನಿಗಿ ಕೆಂಡದ ಮೇಲೆ ಕುಳಿತು ಸವಾರಿ ಮಾಡುವ ಸಂಕಷ್ಟವನ್ನು ಅನುಭವಿಸುತ್ತಾರೆ. ವಾಹನಗಳ ನಿಲುಗಡೆಯಲ್ಲಿ ನಿಲ್ಲಿಸಿದ ವಾಹನಗಳು ಕೆಲವೇ ಕ್ಷಣಗಳಲ್ಲಿ ಕಾಯ್ದು ಹಂಚಿನಂತಾಗಿರುತ್ತದೆ. ಹೀಗಾಗಿ ಆ ವಾಹನಗಳನ್ನು ಬಳಸಲೂ ಸಹ ಸವಾರರು ಹಿಂದೇಟು ಹಾಕುವಷ್ಟರ ಮಟ್ಟಿಗೆ ಬಿಸಿಲಿನ ಪ್ರಖರತೆಯೂ ಭಯವನ್ನು ಹಾಗೂ ಆತಂಕವನ್ನು ಹುಟ್ಟಿಸಿದೆ.
ಇನ್ನು ಸಹಜವಾಗಿಯೇ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ತಣ್ಣನೆಯ ನೀರಿಗಾಗಿ ಜನರು ಮೊರೆ ಹೋಗುತ್ತಾರೆ. ಫ್ರಿಡ್ಜ್‍ನ ನೀರು ಅತಿಯಾಗಿ ಬಿಸಿ ಆಗುತ್ತವೆ. ಹಾಗಾಗಿ ಮಣ್ಣಿನ ಕುಡಿಕೆ, ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಡಿಕೆಗಳಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನುಕೂಲಕರವಾಗಲಿದೆ. ತಂಪಾದ ಪಾನೀಯಗಳು ನಗರದ ಮುಖ್ಯ ಬೀದಿಗಳಲ್ಲಿ ಲಸ್ಸಿ, ಮಜ್ಜಿಗೆ ಮುಂತಾದವುಗಳನ್ನು ಮಡಿಕೆಗಳಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಾರೆ.
ನಗರದ ಆಯಕಟ್ಟಿನ ಹಾಗೂ ಜನನಿಬಿಡ ಸ್ಥಳಗಳಲ್ಲಿ ಹಣ್ಣಿನ ಜ್ಯೂಸ್ ಸೆಂಟರ್‍ಗಳು ತೆರೆಯಲಾಗಿದೆ. ಮಾವು, ನೇರಳೆ, ಹಣ್ಣು, ಕರಬೂಜ್, ಸೀಬೆ ಹಣ್ಣು, ಕಲ್ಲಂಗಡಿ ಹಣ್ಣು, ಬಾಳೆ ಹಣ್ಣಿನ ಜ್ಯೂಸ್ ಸೇರಿದಂತೆ ವಿವಿಧ ರೀತಿಯ ಹಣ್ಣುಗಳ ಜ್ಯೂಸ್‍ಗಳನ್ನೂ ಸಹ ಮಾಡಲಾಗುತ್ತದೆ.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹಿಡಿದು, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ರೈಲು ನಿಲ್ದಾಣ ಪ್ರದೇಶ, ಐವಾನ್ ಶಾಹಿ ಪ್ರದೇಶ, ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯದ ಮುಂದಿನ ವೃತ್ತ, ರಾಮಮಂದಿರ ವೃತ್ತ, ಹಳೆ ಜೇವರ್ಗಿ ಕ್ರಾಸ್, ಹೊಸ ಜೇವರ್ಗಿ ಕ್ರಾಸ್, ನೂತನ ವಿದ್ಯಾಲಯ ರಸ್ತೆ, ಜಿಲ್ಲಾ ನ್ಯಾಯಾಲಯ ರಸ್ತೆ, ಮಿನಿ ವಿಧಾನಸೌಧ ಮುಂದಿನ ಹಾಗೂ ಹಿಂದಿನ ರಸ್ತೆಗಳ ಅಕ್ಕ,ಪಕ್ಕ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಹುಮ್ನಾಬಾದ್ ಬೇಸ್, ಬಿಲಗುಂದಿ ವೃತ್ತ, ಸೇಡಂ ರಸ್ತೆ, ವಿಶ್ವವಿದ್ಯಾಲಯ, ಹೈಕೋರ್ಟ್ ಪೀಠದ ರಸ್ತೆ, ಆಳಂದ್ ನಾಕಾ, ಹುಮ್ನಾಬಾದ್ ಬೇಸ್ ಸೇರಿದಂತೆ ಎಲ್ಲಿ ನೋಡಿದರಲ್ಲಿಯೂ ಸಣ್ಣ, ಪುಟ್ಟ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಹಾಗೂ ಕಬ್ಬಿನ ಅಂಗಡಿಗಳು ಅಲ್ಲಲ್ಲಿ ಬಾಯಾರಿಕೆಯನ್ನು ಹಿಂಗಿಸುತ್ತಿವೆ.
ಬೇಸಿಗೆ ಸಂದರ್ಭದಲ್ಲಿ ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಸೇವಿಸಬೇಕು. ಹಣ್ಣಿನ ಪದಾರ್ಥಗಳನ್ನು ತಿನ್ನಬೇಕು. ಮಾಂಸದ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ತಣ್ಣನೆಯ ಪಾನೀಯಗಳನ್ನು ಕುಡಿಯಬೇಕು. ಮೊಸರು, ಮಜ್ಜಿಗೆ, ಡ್ರೈ ಫ್ರೂಟ್ಸ್ ಮತ್ತು ತರಕಾರಿಗಳನ್ನು ಹೆಚ್ಚಿಗೆ ಬಳಕೆ ಮಾಡಬೇಕು. ಕಬ್ಬಿನ ಹಾಲು, ಎಳೆ ನೀರು ಕುಡಿಯಬೇಕು. ಇದು ಆರೋಗ್ಯಕ್ಕೆ ಹಿತಕರ ಎಂದು ವೈದ್ಯರು ಹೇಳುತ್ತಾರೆ.
ಕಲಬುರಗಿಯಲ್ಲಿ ಮೊದಲ ಕೊರೋನಾ ಸಾವು ಸಂಭವಿಸಿದ್ದರಿಂದ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ಈಗಾಗಲೇ ಕೋವಿಡ್ ನಿಯಮಗಳನ್ನು ಜಾರಿಗೆ ತಂದಿದ್ದು, ಮಾಲ್ ಹಾಗೂ ಚಿತ್ರಮಂದಿರಗಳನ್ನು ಒಂದು ವಾರ ಕಾಲ ಬಂದ್ ಮಾಡಿಸಿದೆ. ಹೀಗಾಗಿ ಕೋವಿಡ್ ನಿಯಮಗಳು ಕಟ್ಟುನಿಟ್ಟಾಗಿ ಪ್ರತಿಯೊಬ್ಬರೂ ಪಾಲಿಸುವ ದಿಸೆಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಹೇರಳವಾಗಿ ಮಡಿಕೆ, ಕುಡಿಕೆಗಳು ಸಿಗುತ್ತವೆ. ಯಂಕವ್ವನ ಮಾರುಕಟ್ಟೆಯಲ್ಲಿಯೂ ಸಹ ಮಡಿಕೆಗಳು ಲಭ್ಯ ಇವೆ. ಅದೇ ರೀತಿ ಕಣ್ಣಿ ಮಾರುಕಟ್ಟೆ, ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆಯೂ ಮಡಿಕೆಗಳನ್ನೂ ಗ್ರಾಹಕರು ಖರೀದಿಸುತ್ತಿದ್ದಾರೆ. ಮಡಿಕೆಗಳನ್ನು ಕೇವಲ ಬಡವರು ಅಷ್ಟೇ ಅಲ್ಲ, ಶ್ರೀಮಂತರೂ ಸಹ ಬಿರು ಬಿಸಿಲಿನಲ್ಲಿ ಬಳಕೆ ಮಾಡುವ ಮೂಲಕ ಆರೋಗ್ಯ ಕಾಳಜಿಯನ್ನು ಮಾಡಿಕೊಳ್ಳುತ್ತಿದ್ದಾರೆ.