ವಿಮಾ ತಿದ್ದುಪಡಿಗೆ ಸಂಸತ್ ಅಂಗೀಕಾರ: ಎಫ್ ಡಿ ಐ ಪ್ರಮಾಣ ಶೇ.49 ರಿಂದ 76 ಕ್ಕೆ ಹೆಚ್ಚಳ
ನವದೆಹಲಿ : ರಾಜ್ಯಸಭೆಯಲ್ಲಿ ಅಂಗೀಕಾರ ರೂಪದಲ್ಲಿದ್ದ ವಿಮಾ ತಿದ್ದುಪಡಿ ಮಸೂದೆ 2021ಕ್ಕೆ ಲೋಕಸಭೆ ಇಂದು ಅಂಗೀಕಾರ ನೀಡಿದೆ.
ಈ ಮಸೂದೆ 1938ರ ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವನ್ನು ಭಾರತೀಯ ವಿಮಾ ಕಂಪನಿಯ ಮೇಲೆ ಹೆಚ್ಚು ಮಾಡುವ ಉದ್ದೇಶವನ್ನು ಹೊಂದಿದೆ.
ವಿಮಾ ಕಂಪೆನಿಗಳು ಸದ್ಯ ಇರುವ ಶೇಕಡ 49ರ ವಿದೇಶಿ ನೇರ ಹೂಡಿಕೆ ಪ್ರಮಾಣವನ್ನು ಶೇಕಡ 74ಕ್ಕೆ ಹೆಚ್ಚಿಸಲು ಅನುವು ಮಾಡಿಕೊಡಲಾಗಿದೆ.
ಮಸೂದೆ ಕುರಿತು ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ತಿದ್ದುಪಡಿಯಿಂದಾಗಿ ವಿಮಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹರಿದು ಬರಲು ಸಹಕಾರಿಯಾಗಲಿದೆ ಎಂದರು.
ಹೂಡಿಕೆ ಏರಿಕೆ;
2015ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇಕಡ 49ಕ್ಕೆ ಹೆಚ್ಚಿಸಲಾಗಿತ್ತು. ಅದರಿಂದಾಗಿ ಕಳೆದ 5 ವರ್ಷಗಳಲ್ಲಿ 26 ಸಾವಿರ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ. ಈ ಮೂಲಕ ಶೇಕಡ 76 ರಷ್ಟು ಪ್ರಗತಿಯಾಗಿದೆ ಎಂದರು.
ದೇಶದ ಎಲ್ಲಾ ಜನತೆಗೆ ವಿಮಾ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಹೆಚ್ಚು ಸಂಪನ್ಮೂಲಗಳು ಬಂದಷ್ಟು ಹೆಚ್ಚು ಜನರನ್ನು ವಿಮಾ ಸೌಲಭ್ಯದಲ್ಲಿ ತರಲು ಸಾಧ್ಯವಾಗಲಿದೆ ಎಂದರು
ವಿಮಾ ಕ್ಷೇತ್ರದಲ್ಲಿರುವ 24 ಲಕ್ಷ ಖಾಸಗಿ ನೌಕರರು ಹಾಗೂ ಸಾರ್ವಜನಿಕ ವಲಯದ ವಿಮಾ ಕಂಪೆನಿಯಲ್ಲಿರುವ 17 ಲಕ್ಷ ಸಿಬ್ಬಂದಿಯ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.