ಬೀದರ : ಬಸವಕಲ್ಯಾಣ ಕ್ಷೇತ್ರಕ್ಕೆ 5 ಸಾವಿರ ಮನೆ: ಸಚಿವ ಚವ್ಹಾಣ್
ಬೀದರ : ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 2020-21ನೇ ಸಾಲಿಗೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 28 ಗ್ರಾಮ ಪಂಚಾಯಿತಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಸತಿ ರಹಿತ ಜನರಿದ್ದಾರೆ. ವಸತಿ ರಹಿತರಿಗೆ ಮನೆಗಳನ್ನು ಒದಗಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಹಲವು ಬಾರಿ ಭೇಟಿಯಾಗಿ ಮನವಿ ಮಾಡಿದ್ದೆ. ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕೂಡ ವಸತಿ ಸಚಿವರಿಗೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.
ಸೋಮಣ್ಣ ಅವರು ಬಸವಕಲ್ಯಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮನೆ ಮಂಜೂರು ಮಾಡಿಸುವಂತೆ ತಮ್ಮನ್ನು ಪದೇ ಪದೇ ಒತ್ತಾಯಿಸಿದ್ದರು.
ಸಂಸದ ಭಗವಂತ ಖೂಬಾ ಮತ್ತು ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆಯವರೂ ವಸತಿ ಸಚಿವರನ್ನು ಭೇಟಿ ಮಾಡಿ
ಮನೆ ಮಂಜೂರು ಮಾಡುವಂತೆ ಕೋರಿದ್ದರು. ನಮ್ಮ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಸವಕಲ್ಯಾಣ ತಾಲ್ಲೂಕಿನ ವಸತಿ ರಹಿತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬಸವಕಲ್ಯಾಣದಲ್ಲಿ ವಸತಿ ರಹಿತರು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಿ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣದಲ್ಲಿರುವ ಎಲ್ಲ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.