ರೈಲ್ವೆ ಡಿವಿಷನ್ಗೆ ಒಪ್ಪಿಗೆ ನೀಡಿ ಕೈ ಬಿಟ್ಟ ಕೇಂದ್ರ! ಕಲಬುರಗಿ ಜನರ ಬಹುಕಾಲದ ಕನಸಿಗೆ ಕೊಳ್ಳಿ ಇಟ್ಟ ಮೋದಿ ಸರ್ಕಾರ
ಹೈಲೈಟ್ಸ್:
- ಕಲಬುರಗಿ ರೈಲ್ವೆ ವಿಭಾಗ ವ್ಯಾಪ್ತಿಗೆ ಒಪ್ಪಿಗೆ ನೀಡಿ ಕೈ ಬಿಟ್ಟ ಕೇಂದ್ರ
- ನಿಯಮಬದ್ಧವಾಗಿ ಪ್ರಕ್ರಿಯೆ ಆರಂಭಗೊಂಡಿದ್ದರೂ ಯೋಜನೆ ವಾಪಸ್
- ಡಿವಿಷನ್ ವಾಪಸ್ ಪಡೆದದ್ದನ್ನು ಒಪ್ಪಿಕೊಂಡ ರೈಲ್ವೆ ಇಲಾಖೆ
- ಕಲಬುರಗಿ ಜನರ ಬಹುಕಾಲದ ಕನಸಿಗೆ ಕೊಳ್ಳಿ ಇಟ್ಟಿರುವುದು ಆರ್ಟಿಐನಲ್ಲಿ ಬಯಲು
- ಪಕ್ಷಾತೀತವಾಗಿ ಹೋರಾಡಲು ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಒತ್ತಾಯ
ಕಲಬುರಗಿ: ಕಲಬುರಗಿ ರೈಲ್ವೆ ಡಿವಿಷನ್ ಬಗ್ಗೆ ಮತ್ತೊಂದು ಸತ್ಯಾಂಶ ಬಯಲಿಗೆ ಬಂದಿದೆ. ನಿಯಮ ಬದ್ಧವಾಗಿ ಕಲಬುರಗಿ ರೈಲ್ವೆ ಡಿವಿಷನ್ ಘೋಷಿಸಿ ಕಾನೂನು ಪ್ರಕಾರ ಸರಕಾರಿ ಪ್ರಕ್ರಿಯೆ ಕೈಗೊಂಡ ಬಳಿಕವೂ ಯೋಜನೆ ಕೈ ಬಿಟ್ಟಿರುವುದು ಕೇಂದ್ರದ ಮುಖವಾಡ ಕಳಚಿದಂತಾಗಿದೆ.
ಯೋಜನೆಗೆ ರೈಲ್ವೆ ಅನುಮೋದನೆ ನೀಡಿ, ಕಟ್ಟಡಕ್ಕಾಗಿ ಟೆಂಡರ್ ಕರೆದು ಬಳಿಕ ಕೈ ಬಿಟ್ಟಿರುವುದು ಒಂದೆಡೆಯಾದರೆ, ಡಿವಿಷನ್ಗೆ ಯಾವ ಯಾವ ಭಾಗಗಳನ್ನು ಸೇರಿಸಬೇಕು ಎಂದು ನಿರ್ಧರಿಸಿ ವ್ಯಾಪ್ತಿ ಕೂಡ ಫಿಕ್ಸ್ ಮಾಡಲಾಗಿತ್ತು. ಇಷ್ಟಾದ ಬಳಿಕವೂ ಯೋಜನೆ ಕೈ ಬಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ರೈಲ್ವೆ ವಿಭಾಗ ಯೋಜನೆ ರದ್ದುಗೊಳಿಸಿರುವುದಕ್ಕೆ ಈಗಾಗಲೇ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನುಮೋದನೆ ನೀಡಿ, ವ್ಯಾಪ್ತಿಯ ನೀಲನಕ್ಷೆ ತಯಾರಿಸಿ, ಭೂಮಿ ಮಂಜೂರು ಮಾಡಿಯೂ ಸದ್ಯಕ್ಕೆ ಕೈ ಬಿಟ್ಟಿರುವುದು ರೈಲ್ವೆ ಬೋರ್ಡ್ ಒಪ್ಪಿಕೊಂಡಿದ್ದು, ಈ ಯೋಜನೆ ಮತ್ತೆ ಚಿಗುರೊಡೆಯಲು ಪಕ್ಷಾತೀತ ಹೋರಾಟ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ಕಲಬುರಗಿ ರೈಲ್ವೆ ವಿಭಾಗ ಆರಂಭವಾಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯಂತೆ ಕೇಂದ್ರ ಸರಕಾರ 2014ರಲ್ಲಿ ರೈಲ್ವೆ ವಿಭಾಗ ಮಂಜೂರಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಈ ಯೋಜನೆ ಕೈ ಬಿಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದರಿಂದ ಈ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವ್ಯಾಪ್ತಿ ಹೇಗಿತ್ತು ?
2014ರಲ್ಲಿ ಅನುಮೋದನೆ ನೀಡಿದ ನೀಲನಕ್ಷೆಯಲ್ಲಿ ವಾಡಿ-ವಿಕಾರಬಾದ್, ವಾಡಿ-ರಾಯಚೂರು, ವಾಡಿ-ಹೊಟಗಿ, ಹೊಟಗಿ- ಬಾಗಲಕೋಟ ಮತ್ತು ಹೊಸ ಲೈನ್ಗಳ ಸೇರ್ಪಡೆ ರಾಯಚೂರು -ಗಿಣಗೇರಾ, ವಾಡಿ-ಗದಗ, ಕಲಬುರಗಿ- ಖಾನಾಪುರ ರೂಟ್ಗಳನ್ನು ಈ ರೈಲ್ವೆ ವಿಭಾಗಕ್ಕೆ ಸೇರಿಸಲಾಗಿತ್ತು. ಹೊಸ ಯೋಜನೆಗಳನ್ನು ಮಾತ್ರ ಅನುಮೋದನೆ ಪಡೆಯುವುದು ಬಾಕಿಯಿತ್ತು. ರೈಲ್ವೆ ವಿಭಾಗಕ್ಕಾಗಿಯೇ ರಾಜ್ಯ ಸರಕಾರ 43 ಎಕರೆಯನ್ನು ಒದಗಿಸಿದೆ. ಆದರೂ ಯೋಜನೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ.