67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ..! ಧನುಷ್​, ಮನೋಜ್​ ಬಾಜ್ಪೆ, ಕಂಗನಾಗೆ ಪ್ರಶಸ್ತಿ ಗರಿ..!

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2019ನೇ ಸಾಲಿನ ಅತ್ಯುತ್ತಮ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ಘೋಷಿಸಲಾಗಿದೆ. ಕಳೆದ ವರ್ಷ ಕೊರೋನಾ ಹಾವಳಿ ಹಿನ್ನಲೆಯಲ್ಲಿ ಪ್ರಶಸ್ತಿಗಳನ್ನ ಘೋಷಣೆ ಮಾಡಿರಲಿಲ್ಲ. ಧನುಷ್​ ಮತ್ತು ಮನೋಜ್​ ಬಾಜ್ಪೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ್ರೆ, ಕಂಗನಾ ರಾಣಾವತ್​ಗೆ​​ ಮತ್ತೊಮ್ಮೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿದೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

 

2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನ ಘೋಷಿಸಲಾಗಿದ್ದು, ಅಸುರನ್​ ಚಿತ್ರದ ನಟನೆಗಾಗಿ ಧನುಷ್​ ಮತ್ತು ಬೋಂಸ್ಲೆ ಚಿತ್ರದ ನಟನೆಗಾಗಿ ಮನೋಜ್​ ಬಾಜ್ಪೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಮಣಿಕರ್ಣಿಕಾ ಮತ್ತು ಪಂಗಾ ಚಿತ್ರಗಳ ಮನೋಜ್ಞ ನಟನೆಗಾಗಿ ಕಂಗನಾ ರಾಣಾವತ್ ಅವರಿಗೆ​ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಕೊರೋನಾ ಹಾವಳಿ ಕಾರಣ ಕಳೆದ ವರ್ಷ ಘೋಷಣೆಯಾಗಬೇಕಿದ್ದ ಪ್ರಶಸ್ತಿಗಳನ್ನ ಈ ವರ್ಷ ಘೋಷಿಸಲಾಗಿದೆ.

2018ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಸಿಂಹಪಾಲು ಲಭಿಸಿತ್ತು. ಆದ್ರೆ, 2019ನೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಮತ್ತು ಅಕ್ಷಿ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಸಿಕ್ಕಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ಸಂಯೋಜನೆಗಾಗಿ ವಿಕ್ರಂ ಮೋರ್​​ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಕಳೆದ ಬಾರಿ ಕೆಜಿಎಫ್​ ಚಾಪ್ಟರ್​-1 ಚಿತ್ರದ ಸ್ಟಂಟ್ಸ್​​ಗಾಗಿ ವಿಕ್ರಂ ಮೋರ್​​ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ್ದರು. ಸತತ ಎರಡನೇ ಬಾರಿ ಅವರಿಗೆ ರಾಷ್ಟ್ರಪ್ರಶಸ್ತಿ ಒಲಿದಿರೋದು ವಿಶೇಷ.

ಮನೋಜ್​ ಕುಮಾರ್​ ನಿರ್ದೇಶನದ ‘ಅಕ್ಷಿ’ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಚಿಚೋರೆಗೆ ಅತ್ಯುತ್ತಮ ಹಿಂದಿ ಸಿನಿಮಾ ಪ್ರಶಸ್ತಿ ಲಭಿಸಿದ್ರೆ, ಪಿಂಗಾರ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ವಿಶ್ವಾಸಂ ಚಿತ್ರದ ಸಂಗೀತಕ್ಕಾಗಿ ಡಿ. ಇಮ್ಮಾನ್​ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಸಾಕಷ್ಟು ವಿಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತರು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *