ಕಲಬುರಗಿ : ರೈಲ್ವೆ ವಿಭಾಗೀಯ ಕಚೇರಿ ರದ್ದು ವಿರೋಧಿಸಿ ರೈತರಿಂದ ಪ್ರತಿಭಟನೆ
ಕಲಬುರಗಿ : ಜಿಲ್ಲೆಗೆ ಮಂಜೂರಾಗಿದ್ದ ರೈಲ್ವೆ ವಿಭಾಗೀಯ ಕಚೇರಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಎಸ್. ಬಿಲ್ಕರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಎಂಟು ವರ್ಷಗಳ ಹಿಂದೆ ನಗರದಲ್ಲಿ ರೈಲ್ವೆ ವಿಭಾಗೀಯ ಕಚೇರಿ ಮಂಜೂರಾಗಿತ್ತು. ಬಜೆಟ್ನಲ್ಲಿ ಐದು ಕೋಟಿ ರೂ.ಗಳನ್ನೂ ಸಹ ಒದಗಿಸಲಾಗಿತ್ತು. ನಗರದ ಐವಾನ್ ಶಾಹಿ ಪ್ರದೇಶದಲ್ಲಿ ರೈತರಿಂದ ಭೂಮಿ ಖರೀದಿಸಿ ತಂತಿ ಬೇಲಿ ಹಾಕಿದ್ದರೂ ಸಹ ಯೋಜನೆ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿನ ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳಾಂತರ ಮಾಡುತ್ತಿವೆ. ರೈಲ್ವೆ ವಿಭಾಗೀಯ ಕಚೇರಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿನ ಸಂಶೋಧನಾ ಕೇಂದ್ರ, ಜವಳಿ ಪಾರ್ಕ್, ನಿಮ್ಜ್, ಆಹಾರ ಪ್ರಯೋಗಾಲಯ, ನವೀಕರಿಸಬಹುದಾದ ಇಂಧನ ಕಚೇರಿ ಮುಂತಾದವುಗಳನ್ನು ಕಿತ್ತುಕೊಳ್ಳುತ್ತಿರುವುದು ಅನ್ಯಾಯದ ಕ್ರಮವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಯಾದಗಿರಿಯಲ್ಲಿ ರೈಲ್ವೆ ಕೋಚ್ ಇದ್ದೂ ಇಲ್ಲದಂತಾಗಿದೆ. ಇದೆಲ್ಲ ನೋಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ ಅವರು, ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಆಗದು. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಅಧೀನ ಸರ್ಕಾರಿ ಕಚೇರಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದ ಅವರು, ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳು ರೈತರಿಗೆ ಮಾರಕವಾಗಿವೆ ಎಂದು ವಿರೋಧಿಸಿದರು.
ದೇವರು ಹಾಗೂ ಧರ್ಮಗಳನ್ನು ರಾಜಕಾರಣಕ್ಕೆ ತರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿವೆ. ಕೂಡಲೇ ಸಮಗ್ರ ಅಭಿವೃದ್ಧಿಗಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.