ಸೇಡಂದಲ್ಲಿ ಜಾಗೃತಿ ರಥಕ್ಕೆ ಚಾಲನೆ

ಕಲಬುರಗಿ : ಸೇಡಂ ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಮಾರ್ಗದರ್ಶಿ ಸಂಸ್ಥೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಸೇಡಂ ತಾಲೂಕು ನ್ಯಾಯಾಲಯ ಆವರಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಎನ್.ಪಿ.ಕೋಪರ್ಡೆ ಅವರು ಇತ್ತೀಚೆಗೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 18 ವರ್ಷದೊಳಗಿನ ಕಿಶೋರಾವಸ್ಥೆ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಕ್ಕಳನ್ನು ನೇಮಿಸಿಕೊಂಡ ಮಾಲೀಕರಿಗೆ 50,000 ರೂ.ಗಳ ವರೆಗೆ ದಂಡ ಅಥವಾ ಎರಡು ವರ್ಷದವರೆಗಿನ ಸೆರೆಮನೆ ವಾಸದ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಬಾಲಕಾರ್ಮಿಕರನ್ನು ನೇಮಿಸಿಕೊಂಡ ತಪ್ಪಿತಸ್ಥ ಮಾಲೀಕರ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಳ್ಳುವುದರ ಜೊತೆಗೆ ಕೆಲಸಕ್ಕೆ ಸೇರಿಸಿದ ಪಾಲಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತದೆ. ಅಧಿಕಾರಿಗಳು ಪ್ರತಿ ತಿಂಗಳು ದಿಢೀರನೇ ಬಾಲಕಾರ್ಮಿಕ ಪತ್ತೆದಾಳಿಗಳನ್ನು ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿ, ತಪ್ಪಿತಸ್ಥ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಸೇಡಂ ಸಹಾಯಕ ಸರ್ಕಾರಿ ಅಭಿಯೋಜಕ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಹ ಕಾರ್ಯದರ್ಶಿಗಳಾದ ರಾಜಕುಮಾರ ಸ್ವಾಮಿ, ರೇವಣ್ಣಾ, ಸೇಡಂ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸತೀಶ ಪಾಟೀಲ್, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿದಂತೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *