ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ: ಅಂತಿಮ ಮತದಾರರ ಪಟ್ಟಿ ಪ್ರಕಟ
ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ್ತು ಕಾರ್ಯಕಾರಿ ಮಂಡಳಿಯ ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಕಲಬುರಗಿ ತಹಸೀಲ್ದಾರರ ಕಾರ್ಯಾಲಯ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಪಂಚಾಯತ್ ಕಾರ್ಯಾಲಯ, ತಾಲೂಕು ಪಂಚಾಯತ್ ಕಾರ್ಯಾಲಯ ಹಾಗೂ ತಾಲೂಕಿನ ಎಲ್ಲಾ ನಾಡ ಕಚೇರಿಗಳಲ್ಲಿ ಪ್ರಚುರಪಡಿಸಲಾಗಿದೆ.
ಇದಲ್ಲದೇ ಸಹಾಯಕ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾದಿಕಾರಿಗಳು ಜಿಲ್ಲೆಯ ಇತರೆ ತಾಲೂಕುಗಳಾದ ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಕಮಲಾಪುರ, ಯಡ್ರಾಮಿ, ಶಹಾಬಾದ್, ಕಾಳಗಿ ತಹಶೀಲ್ದಾರರ ಕಚೇರಿಗಳಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂಬಂಧಪಟ್ಟ ಮತದಾರರು ಈ ಅಂತಿಮ ಮತದಾರರ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.